ಬೆಂಗಳೂರು: ಬಿಸಿಲ ಝಳಕ್ಕೆ ಸಿಲಿಕಾನ್ ಸಿಟಿ ತತ್ತರಗೊಂಡಿದೆ.
ನಗರದಲ್ಲಿ ಸದ್ಯದ ತಾಪಮಾನ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ನಷ್ಟಿದ್ದರೆ, ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಿದೆ.
ತಾಪಮಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ಅತ್ಯುತಮ್ಮ ನಗರವಾಗಿದ್ದ ಬೆಂಗಳೂರು ಇದೀಗ ತನ್ನ ಮೂಲ ಸ್ವರೂಪ ಕಳೆದುಕೊಂಡು ಬಿಸಿ ಏರಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ನೆತ್ತಿ ಸುಡುವ ಪ್ರಖರ ಬಿಸಿಲು.
ಇದರ ಪರಿಣಾಮ ರಾಜಧಾನಿಯಲ್ಲಿ ರಸ್ತೆಗಿಳಿಯುವ ದ್ವಿಚಕ್ರ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಹಾಗೆಂದು ವಾಹನಗಳ ಸಂಖ್ಯೆಯಲ್ಲೇನೂ ಇಳಿಕೆಯಾಗಿಲ್ಲ. ಅಷ್ಟೇ ಅಲ್ಲ, ಸಂಚಾರ ದಟ್ಟಣೆಯೂ ಕಡಿಮೆಯಾಗಿಲ್ಲ. ಏಕೆಂದರೆ, ದ್ವಿಚಕ್ರ ವಾಹನ ತ್ಯಜಿಸಿರುವ ಬಹುತೇಕರು ವಾರಕ್ಕೊಮ್ಮೆ ಮನೆಯಂಗಳದಿಂದ ತೆಗೆಯುತ್ತಿದ್ದ ಕಾರುಗಳ ಮೊರೆ ಹೋಗಿದ್ದಾರೆ.
ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಹೊಂದಿರುವ ಬಹುತೇಕರು ಕಾರುಗಳನ್ನು ಹೊಂದಿದ್ದಾರೆ. ಸಂಚಾರ ದಟ್ಟಣೆಯ ಜಂಜಾಟದಿಂದಾಗಿ ಪ್ರತಿನಿತ್ಯ ದ್ವಿಚಕ್ರ ವಾಹನಗಳನ್ನು ಬಳಸುವ ಇವರು ವಾರಾಂತ್ಯದ ದಿನ ಅಥವಾ ಕುಟುಂಬ ಸಮೇತ ಹೊರಟಾಗ ಮಾತ್ರ ಕಾರುಗಳನ್ನು ಮನೆಯಂಗಳದಿಂದ ಹೊರತೆಗೆಯುತ್ತಾರೆ. ಆದರೆ, ಈಗ ಹಾಗಿಲ್ಲ. ನೆತ್ತಿ ಸುಡುವ ಬಿಸಿಲು, ಸಂಚಾರ ದಟ್ಟಣೆ ಮಧ್ಯೆ ವಾಹನಗಳ ಬಿಸಿ ತಡೆದುಕೊಳ್ಳಲು ಸಾಧ್ಯವಾಗದೆ ತಾವು ನಿತ್ಯ ಓಡಾಡುವ ದ್ವಿಚಕ್ರ ವಾಹನಗಳನ್ನು ಬದಿಗಿಟ್ಟು ಕಾರುಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳಲ್ಲಿ ಪಾರ್ಕಿಂಗ್ ಸಮಸ್ಯೆ ಉಲ್ಬಣಗೊಂಡಿದೆ.
ಲಘುವಾಹನಗಳ ಪಾರ್ಕಿಂಗ್ ಫುಲ್:
ದ್ವಿಚಕ್ರ ವಾಹನಗಳ ಸಂಚಾರದ ತೀವ್ರತೆ ಮಧ್ಯಾಹ್ನದ ಹೊತ್ತು ಅಷ್ಟಾಗಿ ಕಾಣಸಿಗುತ್ತಿಲ್ಲ. ಆದರೂ, ತಾಪಮಾನ ಕೊಂಚ ಇಳಿಮುಖವಾದಂತೆ ಓಡಾಟ ಸರ್ವೇಸಾಮಾನ್ಯವಾಗಿದೆ. ಆದರೆ, ಬೆಳಗಿನ 9ರಿಂದ 11ರ ಅವಧಿ ಕಚೇರಿಯ ಸಮಯವಾದ್ದರಿಂದ, ಈ ಹೊತ್ತಿನಲ್ಲಿ ತೆರಳುವ ಮಂದಿ ಹೆಚ್ಚಾಗಿ ಆಟೋ, ಕಾರು, ಲಘುವಾಹನಗಳ ಮೊರೆ ಹೋಗುತ್ತಿದ್ದಾರೆ. ಇದೇ ಕಾರಣದಿಂದಾಗಿ ಈ ಹೊತ್ತಿನಲ್ಲಿ ದ್ವಿಚಕ್ರ ವಾಹನಗಳಿಗಿಂತ ಹೆಚ್ಚಾಗಿ ಲಘುವಾಹನಗಳ ಸಂಚಾರವೇ ಹೆಚ್ಚಾಗಿ ರಸ್ತೆಯಲ್ಲಿ ಕಾಣುತ್ತಿವೆ.
ಇದರಿಂದ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಬಳಿ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ. ಕಾರಣ, ದ್ವಿಚಕ್ರ ವಾಹನಗಳ ಪಾರ್ಕಿಂಗ್ಗೆ ಜಾಗ ಕಡಿಮೆ ಸಾಕಾದರೆ, ಕಾರುಗಳನ್ನು ನಿಲ್ಲಿಸಲು ಹೆಚ್ಚಿನ ಜಾಗ ಬೇಕು. ಹೀಗಾಗಿ ಕಟ್ಟಡಗಳ ಪಾರ್ಕಿಂಗ್ ಜಾಗದಲ್ಲಿ ಅಲ್ಲಿನ ಸಿಬ್ಬಂದಿಯ ವಾಹನಗಳೇ ತುಂಬಿದ್ದು, ಹೊರಗಿನಿಂದ ಬರುವ ವಿಸಿಟರ್ಸ್ ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆಯಾಗಿದೆ. ಹೀಗಾಗಿ ರಸ್ತೆ ಬದಿ, ನೆರಳಿರುವ ಪ್ರದೇಶಗಳನ್ನು ನಿಲ್ದಾಣದಂತೆ ಬಳಸಲಾಗುತ್ತಿದೆ.
ಸಂಚಾರಿ ಪೊಲೀಸರಿಗೆ ತಲೆನೋವು: ಇನ್ನು ಇವುಗಳಿಗೆ ದಂಡ ವಿಧಿಸುವ ಕೆಲಸವೂ ಕೂಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಪಾರ್ಕಿಂಗ್ ಸಮಸ್ಯೆ ಇರುವುದರಿಂದ ಪಾರ್ಕಿಂಗ್ ನಿಷೇಧ ಇರುವ ಸ್ಥಳಗಳಲ್ಲೂ ಈಗ ವಾಹನಗಳನ್ನು ನಿಲ್ಲಿಸುತ್ತಾರೆ. ಇಂತಹ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳಿಗೆ ಪೊಲೀಸರು ಕ್ಲಾಂಪ್ಗಳನ್ನು ಹಾಕುತ್ತಾರೆ. ಆದರೆ, ಈಗ ಹೆಚ್ಚಾಗಿರುವ ಇಂತಹ ವಾಹನಗಳಿಂದಾಗಿ ಸಂಚಾರಿ ಪೊಲೀಸರ ಬಳಿ ಕ್ಲಾಂಪ್ಗಳ ಕೊರತೆ ಇದೆ. ಹೀಗಾಗಿ ನಿಷೇಧಿತ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿದವರಿಂದ ದಂಡ ವಸೂಲಿ ಮಾಡಲು ಕಾಯಬೇಕಾದ ಪರಿಸ್ಥಿತಿ ಬಂದಿದೆ.
ಇದರಿಂದ ತಪ್ಪಿಸಿಕೊಳ್ಳಲು ಸಂಚಾರಿ ಪೊಲೀಸರು ವಾಹನಗಳಿಗೆ ದಂಡದ ರಸೀತಿಯನ್ನು ಅಂಟಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಆ ವಾಹನದ ನೋಂದಣಿ ಸಂಖ್ಯೆಯನ್ನು ಬರೆದುಕೊಂಡು, ಬಳಿಕ ಆ ವಾಹನದ ಮಾಲೀಕರ ವಿಳಾಸ ಪತ್ತೆ ಹಚ್ಚಿ ಅಂಚೆ ಮೂಲಕ ದಂಡದ ರಸೀದಿ ಕಳುಹಿಸಿಕೊಡುತ್ತಿದ್ದಾರೆ.
-ಭಾಗ್ಯ ಗೌಡ