ಮೇಲುರಸ್ತೆ ದುರಸ್ತಿ ಮಾರ್ಗ ಬದಲಾವಣೆ

ಬೆಂಗಳೂರು: ಸಿರ್ಸಿ ಮೇಲುರಸ್ತೆಯಲ್ಲಿ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಮೇಲುರಸ್ತೆಯ 20 ಜಾಯಿಂಟ್ ಎಕ್ಸ್‌ಪ್ಯಾನ್ಷನ್ ಅಳವಡಿಸುವ ಕಾರ್ಯದಲ್ಲಿ ಈಗಾಗಲೇ 15 ಮುಗಿದಿದ್ದು, ಇನ್ನುಳಿದ ಐದನ್ನು ಅಳವಡಿಸುವ ಕಾರ್ಯ ಮಾ.31ರಿಂದ ಆರಂಭವಾಗಲಿದೆ. ಹೀಗಾಗಿ, ಮಾ.31ರಿಂದ ಏ.9ರವರೆಗೆ ಮೇಲುರಸ್ತೆಯಲ್ಲಿ ಸಂಚಾರ ಬದಲಾಗಲಿದೆ. ಪುರಭವನದಿಂದ ಮೈಸೂರು ಕಡೆಗೆ ಸಂಚರಿಸುವ ವಾಹನಗಳು ಮೇಲುರಸ್ತೆಯ ಆರಂಭದಲ್ಲಿ ಬಲಭಾಗದ ರಸ್ತೆ ಉಪಯೋಗಿಸಿಕೊಂಡು, ಮಾರುಕಟ್ಟೆಯ ಅಪ್‌ರ್ಯಾಂಪ್ ಬಳಿ ಎಡಕ್ಕೆ ತಿರುಗಿ ಮೈಸೂರು ರಸ್ತೆ ಹಾಗೂ ಚಾಮರಾಜಪೇಟೆ ಕಡೆಗೆ ಚಲಿಸಬಹುದು. ಮೈಸೂರು ಕಡೆಯಿಂದ ಬರುವ ವಾಹನ ಮಾರುಕಟ್ಟೆಯ ಡೌನ್‌ರ್ಯಾಂಪ್ ಮೂಲಕ ಎನ್.ಆರ್. ರಸ್ತೆ, ಪುರಭವನದ ಕಡೆಗೆ ಸಂಚರಿಸಬಹುದು ಎಂದು ಬಿಬಿಎಂಪಿ ಪ್ರಧಾನ ಮುಖ್ಯ ಎಂಜಿನಿಯರ್ ರಮೇಶ್ ತಿಳಿಸಿದ್ದಾರೆ.
ವಿದ್ಯುತ್ ತಂತಿ ಮೆಟ್ಟಿ ವ್ಯಕ್ತಿ ಸಾವು
ಕನಕಪುರ: ತಾಲೂಕಿನ ಬೂದಿಗುಪ್ಪೆ ಗ್ರಾಮದಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಕಂಬಕ್ಕೆ ದನಗಳನ್ನು ಕಟ್ಟಲು ಹೋದ ವ್ಯಕ್ತಿಯೊಬ್ಬ ವಿದ್ಯುದಾಘಾತಕ್ಕೆ ಈಡಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತವ್ಯಕ್ತಿಯು ಬೂದಿಗುಪ್ಪೆಯ ನಿವಾಸಿ ನಾರಾಯಣಪ್ಪ(45) ಎಂದು ತಿಳಿದುಬಂದಿದೆ.   ಬೆಳಗಿನ ಜಾವ 5.30 ರಲ್ಲಿ ಎಂದಿನಂತೆ ಲೈಟ್ ಕಂಬಕ್ಕೆ ದನಗಳನ್ನು ಕಟ್ಟಲು ಹೋಗಿದ್ದ ನಾರಾಯಣಪ್ಪ ವಿದ್ಯುತ್ ಹರಿಯುತ್ತಿದ್ದ ತಂತಿ ತುಂಡರಿಸಿ ಬಿದ್ದಿದ್ದನ್ನು ಗಮನಿಸದೆ ಸ್ಪರ್ಶಿಸಿ ತೀವ್ರ ವಿದ್ಯುತ್ ಆಘಾತಕ್ಕೆ ಈಡಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.  ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಅಧಿಕಾರಿಗಳಾದ ಪುಟ್ಟಸ್ವಾಮಿ ಹಾಗೂ ಹೊಸಬೀದಿ ರಾಜು ಕುಟುಂಬಕ್ಕೆ ಸಾಂತ್ವನ ಹೇಳಿ ಸ್ಥಳದಲ್ಲಿಯೇ 30 ಸಾವಿರ ರು. ಪರಿಹಾರದ ತಾತ್ಕಾಲಿಕ ಚೆಕ್ ಒದಗಿಸಿ ಇಲಾಖೆಯ ವತಿಯಿಂದ ಹೆಚ್ಚಿನ ಪರಿಹಾರ ಒದಗಿಸುವ ಆಶ್ವಾಸನೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮುಖಂಡ ಬೂದಿಗುಪ್ಪೆ ಸಂಪತ್ ಅವರು ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ವೃತ್ತ ನಿರೀಕ್ಷಕ ಧನಂಜಯ ಭೇಟಿ ನೀಡಿದ್ದರು. ಕನಕಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ಹಾಗೂ ಪಂಚನಾಮೆ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.
ಜನರಲ್ಲಿ ಕಾನೂನು ಅರಿವು ಮೂಡಿಸಿ
ರಾಮನಗರ: ವಕೀಲರು ತಮ್ಮ ವೃತ್ತಿ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾ. ಕೆ.ಎನ್.ಕೇಶವನಾರಾಯಣ ಕರೆ ನೀಡಿದರು.  ರಾಮನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವಕೀಲರು ತಮ್ಮ ಸಂಘಟನೆಯ ಮೂಲಕ ಜನತೆಯಲ್ಲಿ ಕಾನೂನಿನ ಅರಿವು ಮೂಡಿಸಲು ಮುಂದಾಗಬೇಕು ಎಂದರು.  ನಮ್ಮದು ಹಳ್ಳಿಗಳ ದೇಶವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಆದರೆ, ನಮ್ಮಲ್ಲಿ ಬಹುಸಂಖ್ಯಾತರಿಗೆ ಕಾನೂನಿನ ಅರಿವಿನ ಕೊರತೆ ಕಾಡುತ್ತಿದೆ. ಇದನ್ನು ನಿವಾರಿಸುವುದು ಅನಿವಾರ್ಯ ಎಂದರು. 
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅದೆಷ್ಟೋ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಜನತೆಗೆ ಕಾನೂನಿನ ಅರಿವಿದ್ದಾಗ ಅವ್ಯವಹಾರ, ಹಗರಣ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಕೇಶವನಾರಾಯಣ ಹೇಳಿದರು. ವಕೀಲರ ಸಂಘದಿಂದ ಆಯ್ದ ಹಳ್ಳಿಗಳನ್ನು ದತ್ತು ತೆಗೆದುಕೊಂಡು, ಅಲ್ಲಿನ ಜನರಿಗೆ ಕಾನೂನಿನ ಅರಿವು ಮೂಡಿಸುವ ಜತೆಗೆ ಹಳ್ಳಿಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.   ರಾಮನಗರದಲ್ಲಿ ವಕೀಲರ ಭವನಕ್ಕೆ ಸರ್ಕಾರದಿಂದ ನಿವೇಶನ ಮಂಜೂರಾಗಿದೆ. ಶೀಘ್ರದಲ್ಲಿಯೆ ಗುದ್ದಲಿ ಪೂಜೆಯನ್ನು ಮಾಡಲಾಗುವುದು. ರಾಮನಗರಕ್ಕೆ ಕೌಟುಂಬಿಕ ನ್ಯಾಯಾಲಯ ಮತ್ತು ಕಾರ್ಮಿಕ ನ್ಯಾಯಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ವಕೀಲ ಎನ್. ಸುಬ್ಬಶಾಸ್ತ್ರಿ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com