ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.10-
ನಾಡಿನ ಸಂಸ್ಕೃತಿ, ಪರಿಸರ ಹಾಗೂ ಭಾಷೆಯ ರಕ್ಷಣೆಗೋಸ್ಕರ ಅದಮ್ಯ ಚೇತನ ಉತ್ಸವವನ್ನು ನಗರದಾದ್ಯಂತ ಆಚರಿಸಲಾಗುತ್ತಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ನಗರದ ಬಸವನಗುಡಿಯಲ್ಲಿ ಉತ್ಸವ ನಡೆಸಲಾಗುತ್ತಿತ್ತು. ಆದರೆ ನಗರದ ಎಲ್ಲ ಭಾಗಗಳಲ್ಲಿಯೂ ಬೇಡಿಕೆಗಳಿದ್ದವು. ಈ ಹಿನ್ನೆಲೆಯಲ್ಲಿ ನಗರದ ಆರು ಭಾಗಗಳಲ್ಲಿ ಮುಖ್ಯ ಉತ್ಸವಕ್ಕೂ ಮುಂಚೆ ಸಣ್ಣ ಪ್ರಮಾಣದಲ್ಲಿ ಉತ್ಸವ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ನಗರದ ಬನಶಂಕರಿ ಎರಡನೇ ಹಂತದಲ್ಲಿ ಭಾನುವಾರ ನಡೆದ ಅದಮ್ಯ ಚೇತನ ಉತ್ಸವದಲ್ಲಿ ಸ್ಪರ್ಧಾಳುಗಳಿಗೆ ಪ್ರಶಸ್ತಿ ವಿತರಿಸಿ ತೇಜಸ್ವಿನಿ ಅನಂತಕುಮಾರ್ ಮಾತನಾಡಿದರು.
ಡಿಸೆಂಬರ್‌ಗೆ ವಾರ್ಷಿಕ ಉತ್ಸವ: ಬೆಂಗಳೂರಿನ 18 ಕಿ.ಮೀ. ವ್ಯಾಪ್ತಿಯಲ್ಲಿ ಅದಮ್ಯ ಚೇತನ ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆ ನಡೆಸುತ್ತಿದೆ. ಆ ಭಾಗಗಳಲ್ಲಿಯೂ ಉತ್ಸವ ನಡೆಸುವಂತೆ ಬೇಡಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಈಗಾಗಲೇ ವಿಜಯನಗರ, ಬಿಟಿಎಂ ಬಡಾವಣೆ ಹಾಗೂ ಬನಶಂಕರಿಯಲ್ಲಿ ಉತ್ಸವ ನಡೆಸಲಾಗಿದೆ. ಮಡಿವಾಳ, ಎಚ್‌ಎಸ್‌ಆರ್ ಬಡಾವಣೆಯಲ್ಲಿ ಸಹ ಉತ್ಸವ ಆಯೋಜಿಸಲಾಗುವುದು. ಆರನೇ ಉತ್ಸವಕ್ಕೆ ಇನ್ನು ಸ್ಥಳ ನಿಗದಿಯಾಗಿಲ್ಲ. ಆದರೆ ಎಂದಿನಂತೆ ಡಿಸೆಂಬರ್ ತಿಂಗಳಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಾರ್ಷಿಕ ಉತ್ಸವ ನಡೆಯಲಿದೆ ಎಂದು ಅವರು ಹೇಳಿದರು.
16 ಬಗೆಯ ಸ್ಪರ್ಧೆ: ಪ್ರತಿ ಉತ್ಸವದಲ್ಲಿಯೂ 16 ಬಗೆಯ ಸ್ಪರ್ಧೆ ನಡೆಸಲಾಗುತ್ತಿದೆ. ಸಂಸ್ಥೆ ಆಯೋಜಿಸುತ್ತಿರುವ ಸ್ಪರ್ಧೆಗಳ ನಿಯಮಗಳಲ್ಲಿಯೂ ಭಾಷೆ ಹಾಗೂ ಸಂಸ್ಕೃತಿ ಬಗ್ಗೆ ಎಚ್ಚರ ವಹಿಸಲಾಗಿದೆ.
ರಂಗೋಲಿ ಸ್ಪರ್ಧೆಗೆ ನೈಸರ್ಗಿಕ ಬಣ್ಣವನ್ನು ಮಾತ್ರ ಬಳಸಲಾಗಿದೆ ಹಾಗೂ ಎಲ್ಲ ಕಾರ್ಯಕ್ರಮಗಳನ್ನು ಕನ್ನಡದಲ್ಲಿಯೇ ನಡೆಸಿಕೊಡಲಾಗುತ್ತಿದೆ ಎಂದು ಅವರು ವಿವರಿಸಿದರು.
17 ವರ್ಷದಿಂದ ಸಾಮಾಜಿಕ ಕಾರ್ಯ: ಕಳೆದ 17 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅದಮ್ಯ ಚೇತನವು ಪ್ರತಿದಿನ 2 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಬಿಸಿಯೂಟ ಯೋಜನೆ ಕಲ್ಪಿಸುತ್ತಿದೆ. ಇದಲ್ಲದೇ ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಪರಿಸರ ಮತ್ತು ರಾಷ್ಟ್ರೀಯ ಪ್ರಜ್ಞೆ ಮೂಡಿಸುವಲ್ಲಿ ನೆರವಾಗುತ್ತಿದೆ ಎಂದು ಅವರು ಹೇಳಿದರು.
ಬಹುಮಾನ ವಿತರಣೆ: ಬನಶಂಕರಿಯ ಜೆಎಸ್‌ಎಸ್ ಶಾಲೆಯಲ್ಲಿ ನಡೆದ ಅದಮ್ಯ ಚೇತನ ಉತ್ಸವದಲ್ಲಿ ಛದ್ಮವೇಷ, ಗಾಯನ, ಆಶುಭಾಷಣ, ಭಾಷಣ, ರಂಗೋಲಿ, ಹೂವಿನ ಮಾಲೆ ಪೋಣಿಸುವುದು, ಮೆಹಂದಿ, ಅಚ್ಛ ಕನ್ನಡದಲ್ಲಿ ಭಾಷಣ ಹಾಗೂ ಕಾಳು ವಿಂಗಡಣೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸುಮಾರು 500ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ತೇಜಸ್ವಿನಿ ಅನಂತಕುಮಾರ್ ಅವರು ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.
Advertisement