
ಧಾರವಾಡದಲ್ಲಿ ಎಲ್ಲೇ ನಿಂತು ಕಲ್ಲು ಎಸೆದರೂ ಅದು ಸಾಹಿತಿಗಳ ಮನೆಗೆ ತಾಗುತ್ತದೆ ಎಂಬ ಮಾತು ಈ ಹಿಂದೆ ಚಾಲ್ತಿಯಲ್ಲಿತ್ತು.
ಆ ಮಾತನ್ನು ಕೊಂಚ ಬದಲಿಸಿ ಹೀಗೂ ಹೇಳಿದರೆ ತಪ್ಪಾಗಲಾರದು. ಈ ಹಿಂದೆ ಬೆಂಗಳೂರಿನ ಯಾವುದೇ ರಸ್ತೆಯಲ್ಲಿ ಸಾಗಿದರೂ ಅದು ಸಾಹಿತಿಗಳ ಮನೆಯನ್ನು ಮುಟ್ಟುತ್ತದೆ.
ಕನ್ನಡ ಸಾಹಿತ್ಯಕ್ಕೆ ಹಳೇ ಬೆಂಗಳೂರಿನ ಕೊಡುಗೆ ಅಷ್ಟೊಂದಿದೆ. ಹಳೇ ಬೆಂಗಳೂರು ಪ್ರದೇಶವಾದ ಬೆಂಗಳೂರು ದಕ್ಷಿಣದ ಬಸವನಗುಡಿ ನಿಜವಾಗಿಯೂ 'ಕನ್ನಡ ಸಾಹಿತಿಗಳ ಗರ್ಭಗುಡಿ'ಯೇ ಎಂಬಷ್ಟು ಛಾಪನ್ನು ಮೂಡಿಸಿದ ಪ್ರದೇಶ.
ಅಲ್ಲದೆ ಮಲ್ಲೇಶ್ವರ ಭಾಗದ ಸಾಹಿತ್ಯದ ನಂಟು ಕೂಡ ಕನ್ನಡ ಸಾಹಿತ್ಯ ಲೋಕದಲ್ಲೇ ಅತೀ ಮಹತ್ವದ ಪ್ರದೇಶದಲ್ಲೊಂದು ಎನ್ನಬಹುದು. ಡಿ.ವಿ.ಗುಂಡಪ್ಪ ಅವರ ಜ್ಞಾಪಕ ಚಿತ್ರಶಾಲೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಬೆಂಗಳೂರು ದಕ್ಷಿಣದ ನಂಟಿನ ವಿವರವಾದ ಮಾಹಿತಿಗಳಿವೆ. ಬಸವನಗುಡಿ ನ್ಯಾಷನಲ್ ಕಾಲೇಜು ಇಲ್ಲೇ ಇದ್ದುದರಿಂದಲೋ ಅಥವಾ ಹಳ್ಳಿಯ ಸಾಂಪ್ರದಾಯಿಕ ಸೊಗಡು ಅಲ್ಲಿ ಇದ್ದುದರಿಂದಲೋ ಏನೋ ಸಾಹಿತಿಗಳು ಬಸವನಗುಡಿಯ ಪ್ರದೇಶ ಇಷ್ಟಪಟ್ಟಿದ್ದರು.
ಅಲ್ಲದೆ ಆ ಭಾಗದಲ್ಲಿ ವಾಸಿಸುತ್ತಿದ್ದರು. ಹಾಗಾಗಿ ಆ ಭಾಗದಲ್ಲಿ ಅವರು ತಿರುಗಾಡುತ್ತಿದ್ದರು. ಇಲ್ಲಿ ಅಂತಹ ಮಹಾನ್ ವ್ಯಕ್ತಿಗಳು ಕೂತಿದ್ದರು. ಇಲ್ಲೇ ನಡೆದುಕೊಂಡು ಹೋಗುತ್ತಿದ್ದರು. ಇಲ್ಲೇ ಸಭೆ ನಡೆದಿತ್ತು, ಇದೇ ಹೊಟೇಲ್‌ನಲ್ಲಿ ಬಂದು ದೋಸೆ ತಿನ್ನುತ್ತಿದ್ದರು, ಇಲ್ಲಿ ಪಕೋಡಾ ತಿನ್ನುತ್ತಿದ್ದರು.. ಎಂಬ ಸಾಕ್ಷ್ಯಗಳು ಬಸವನಗುಡಿ ಭಾಗದಲ್ಲಿ ವಿಫುಲವಾಗಿ ಸಿಗುತ್ತವೆ.
ಅಂತಹ ಮಹಾನ್ ಸಾಹಿತಿಗಳಲ್ಲಿ ಡಿ.ವಿ.ಗುಂಡಪ್ಪ, ತೀ.ನಂ.ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ.ಸೀತಾರಾಮ್, ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿ, ಜಿ.ಪಿ. ರಾಜರತ್ನಂ, ಮೋಟಗಾನಹಳ್ಳಿ ಸುಬ್ರಮಣ್ಯ ಶಾಸ್ತ್ರಿ, ಟಿ.ಎಸ್.ವೆಂಕಣ್ಣಯ್ಯ, ಶ್ರೀನಿವಾಸ ಶಾಸ್ತ್ರಿಗಳು, ಬೆಳ್ಳಾವೆ ವೆಂಕಟನಾರಾಯಣಪ್ಪ, ಎಂ.ಆರ್. ಶ್ರೀನಿವಾಸ ಮೂರ್ತಿ, ಶಿವಮೊಬ್ಬ ಸುಬ್ಬಣ್ಣ, ನವರತ್ನರಾಯರಂತಹವರು ಪ್ರಮುಖರು.
ಅವರೆಲ್ಲರೂ ವಸ್ತುಗಳಿಗಿಂತ ವ್ಯಕ್ತಿಗಳಿಗೆ ಹಾಗೂ ವಿಚಾರಕ್ಕಿಂತ ಭಾವನೆಗಳಿಗೆ ಬೆಲೆ ಕೊಡುತ್ತಿದ್ದವರು. ಇದು ಅವರೆಲ್ಲರ ಪ್ರಮುಖ ಲಕ್ಷಣ. ಪ್ರತಿಯೊಬ್ಬರೂ ಭಾವಜೀವಿಗಳಾಗಿ ಬದುಕಿದವರು. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ನೋಡುತ್ತಿದ್ದ ಭಾವನಾತ್ಮಕ ಜೀವಿಗಳು. ಹಾಗಾಗಿ ಅವರು ಅಳಿದರೂ ಅವರ ಸಾಹಿತ್ಯ ಉಳಿದುಕೊಂಡಿದೆ. ಅವರೆಲ್ಲರೂ ವ್ಯಕ್ತಿತ್ವದ ನಡುವಿನ ದ್ವೇಷದಿಂದ ದೂರವಿದ್ದವರು. ಇಂದು ಅವೆಲ್ಲ ಕೇವಲ ನೆನಪುಗಳು ಮಾತ್ರ ಎನ್ನುತ್ತಾರೆ ಅವರೆಲ್ಲರನ್ನು ಹತ್ತಿರದಿಂದ ಬಲ್ಲವರು.
ವಸ್ತುಗಳಿಗಿಂತ ವ್ಯಕ್ತಿಗಳಿಗೆ ಹಾಗೂ ವಿಚಾರಕ್ಕಿಂತ ಭಾವನೆಗಳಿಗೆ ಬೆಲೆ ಕೊಡುತ್ತಿದ್ದ ಜೀವಗಳು ಅವು. ಅವರೆಲ್ಲ ಪರಸ್ಪರ ಒಗ್ಗಟ್ಟಿನಿಂದ, ಪ್ರೀತಿಯಿಂದ ಭಾವನಾತ್ಮಕವಾಗಿ ಜೀವಿಸುತ್ತಿದ್ದರು. ಇಂದು ಅಂತಹ ಭಾವನಾತ್ಮಕ ನೆಲೆಗಳಿಂದ ಪ್ರತಿಯೊಬ್ಬರೂ ಕೊಂಚ ದೂರವಾಗಿದ್ದಾರೆ. ಅದಕ್ಕೆ ಮುಂದುವರೆದ ತಂತ್ರಜ್ಞಾನ ಕಾರಣ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಸಂಚಾರ ದಟ್ಟಣೆ ಹೆಚ್ಚಳ, ಮನೆಗಳು ದೂರವಿರುವುದು ಸೇರಿದಂತೆ ವಿವಿಧ ಸಮಸ್ಯೆಗಳಿವೆ. ಹಾಗಾಗಿ ಎಲ್ಲವೂ ದೂರವಾಣಿಯಲ್ಲೇ ಮುಗಿಯುತ್ತದೆ.
-ಶತಾವಧಾನಿ ರಾ.ಗಣೇಶ್
ಸೇರುತ್ತಿದ್ದ ಪ್ರಮುಖ ಸ್ಥಳಗಳು
ಹಲಸೂರು, ಸಾಗರ್ ಚಿತ್ರಮಂದಿರ, ತುಳಸಿತೋಟ, ದೊಡ್ಡಣ್ಣನ ಹಾಲ್, ಎಂ.ಜಿ.ರಸ್ತೆ, ಕಂಠೀರವ ಕ್ರೀಡಾಂಗಣ, ಚಾಮರಾಜಪೇಟೆ, ಬಸವನಗುಡಿ, ಕಬ್ಬನ್‌ಪೇಟೆ, ಬಸವನಗುಡಿ ವಾಹನ ನಿಲ್ದಾಣ(ಟ್ಯಾಕ್ಸಿ ಸ್ಟ್ಯಾಂಡ್), ಪುರಭವನ, ಧರ್ಮಾಂಬುದಿ ಕೆರೆ, ಗವಿಗಂಗಾಧರೇಶ್ವರ ದೇವಸ್ಥಾನ, ಸೆಂಟ್ರಲ್ ಕಾಲೇಜು ಆವರಣ, ಲಾಲ್‌ಬಾಗ್, ಹನುಮಂತನಗರದಲ್ಲಿರುವ ನರಹರಿ ರಾಯನ ಗುಡ್ಡ, ತರಗುಪೇಟೆ... ಮೊದಲಾದವು ಸಾಹಿತಿಗಳ ಹರಟೆಯ, ಕೋಳಿ ಜಗಳಗಳ ಪ್ರದೇಶಗಳು.
- ಶಾಂತ ತಮ್ಮಯ್ಯ
Advertisement