ಪೊಲೀಸ್ ಮಹಿಳಾ ಸಿಬ್ಬಂದಿ ಹೆಚ್ಚಳಕ್ಕೆ ಚಿಂತನೆ

Updated on

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಸಂಖ್ಯೆಯನ್ನು ಶೇ.20ರಿಂದ ಶೇ. 33ರವರೆಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
'ಲಿಂಗ ಸಂವೇದನಾಶೀಲತೆ ಯೋಜನೆ' ಬಗ್ಗೆ ಸಿಐಡಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು. ಅಪರಾಧ ಪ್ರಕರಣಗಳಲ್ಲಿ ಬದಲಾಗುತ್ತಿರುವ ಶೈಲಿ ಗಮನದಲ್ಲಿಟ್ಟುಕೊಂಡು ಮಹಿಳಾ ಸಿಬ್ಬಂದಿ ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಮೂಲದ ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆ ಮಾಡುವುದು ಹಾಗೂ ಅಪರಾಧಗಳನ್ನು ತಡೆಯಲು ಸಾಧ್ಯ ಎಂದರು.
ಹುದ್ದೆ ಭರ್ತಿಗೆ ಕ್ರಮ: ಲಿಂಗ ಸಂವೇದನಶೀಲತೆ ಕುರಿತು ಮಾತನಾಡಿದ ಸಚಿವರು, ಪೊಲೀಸರು ಜನಸ್ನೇಹಿಯಾಗಿರಬೇಕು. ಅದರಲ್ಲೂ ಮಹಿಳೆಯರು ಹಾಗೂ ಮಕ್ಕಳ ಸಮಸ್ಯೆಗಳ ವಿಚಾರದಲ್ಲಿ ಸೂಕ್ಷ್ಮತೆಯಿಂದ ಕಾರ್ಯ ನಿರ್ವಹಿಸಬೇಕು. ಈಗಾಗಲೇ ಸುಮಾರು 25 ಸಾವಿರ ಪೊಲೀಸ್ ಸಿಬ್ಬಂದಿ ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ಈ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ. ರಾಜ್ಯದ 6 ಕೋಟಿ ಜನಸಂಖ್ಯೆ ನಿಯಂತ್ರಣಕ್ಕೆ 1 ಲಕ್ಷ ಪೊಲೀಸರ ಅಗತ್ಯವಿದ್ದು ಖಾಲಿ ಇರುವ 27 ಸಾವಿರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಐಡಿ ಡಿಐಜಿ ಸುಶಾಂತ ಮಹಾಪಾತ್ರ, ಈಗಾಗಲೇ ಹಾಸನ, ಕಡೂರು, ಬೆಂಗಳೂರಿನ ಥಣಿಸಂದ್ರ ಹಾಗೂ ಹುಬ್ಬಳ್ಳಿ ಧಾರವಾಡಗಳಲ್ಲಿ ತರಬೇತಿ ಕೇಂದ್ರಗಳಿವೆ. ಕೇಂದ್ರ ಸರ್ಕಾರದಿಂದ ಅನುದಾನ ಬಂದಿದ್ದು ಹೆಚ್ಚೆಚ್ಚು ಪೊಲೀಸರಿಗೆ ಮುಂದಿನ ದಿನಗಳಲ್ಲಿ ತರಬೇತಿ ಕೊಡಲಾಗುವುದು ಎಂದು ಜಾರ್ಜ್ ತಿಳಿಸಿದರು.
ಗೃಹ ಕಾರ್ಯದರ್ಶಿ ಎಸ್.ಆರ್.ಪಟ್ನಾಯಕ್, ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಾಮ್ ಪಚಾವೋ, ಬಿಪಿನ್ ಗೋಪಾಲಕೃಷ್ಣ ಇದ್ದರು.


ಬುಡಕಟ್ಟು ಜನಾಂಗದ ಮಹಿಳೆಯರಿಗೂ ಅವಕಾಶ
ಬುಡಕಟ್ಟು ಜನಾಂಗದವರೂ ಕೂಡಾ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳುವ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಬುಡಕಟ್ಟು ಜನತೆಗೆ ವಯೋವುತಿ ಸಡಿಲಿಕೆ ನೀಡುವ ಉದ್ದೇಶವಿದೆ ಎಂದು ಜಾರ್ಜ್ ತಿಳಿಸಿದರು. ಇದರಿಂದ ಎಲ್ಲಾ ಜನರಿಗೂ ಉದ್ಯೋಗಾವಕಾಶ ನೀಡುವುದರ ಜತೆಗೆ ಇಲಾಖೆಯಲ್ಲಿ ಅವರ ಪ್ರಾತಿನಿಧ್ಯವನ್ನು ಇರಿಸಲು ಅವಕಾಶ ನೀಡಿದಂತಾಗುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com