ವಿಧಾನ ಪರಿಷತ್: ರಾಜ್ಯದಲ್ಲಿ ಕಾಮುಕರ ಅಟ್ಟಹಾಸ ಮಿತಿ ಮೀರಿದ್ದರೆ, ಸಂಪ್ರದಾಯಕ್ಕೆ ವಿರುದ್ಧವಾಗಿ ಪ್ರಶ್ನೋತ್ತರಕ್ಕೂ ಮುಂಚೆ ಮಹಿಳೆ ಹಾಗೂ ಮಕ್ಕಳ ರಕ್ಷಣೆ ಬಗ್ಗೆ ಚರ್ಚಿಸಬೇಕೆ ಎಂದು ಕಲಾಪದ ಎರಡು ಗಂಟೆ ಸಮಯ ವ್ಯರ್ಥವಾಯಿತು.
ಅತ್ಯಾಚಾರ ಪ್ರಕರಣಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ನಿಯಮಾವಳಿಗೆ ಜೋತು ಬಿದ್ದ ಕಾಂಗ್ರೆಸ್ ಸದಸ್ಯರು ಕೋಲಾಹಲದ ವಾತಾವರಣ ಸೃಷ್ಟಿಸಿದರು. ಪ್ರಶ್ನೋತ್ತರ ನಡೆಸಿ ಚರ್ಚೆ ನಡೆಸಿದರೆ ಏನಾಗುವುದಿಲ್ಲ ಎಂಬ ಉಡಾಫೆ ಉತ್ತರ ನೀಡಿದರು. ಒಮ್ಮೆ ಸದನ ಮುಂದೂಡಿ ಸಂಧಾನ ನಡೆಸಿದರೂ ಪ್ರಯೋಜನವಾಗಲಿಲ್ಲ. ಶುಕ್ರವಾರ ಕಲಾಪ ನಡೆದ 2 ಗಂಟೆ ಕಾಲ ಕೇವಲ ಗಲಾಟೆಗೆ ಸೀಮಿತವಾಯಿತು. ಅಂತಿಮವಾಗಿ ಸ ದನವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಮಕ್ಕಳಿಗಾಗಿ ನಿಯಮ ಬದಲಿಸೋಣ: ನಿಯಮ 59ರಲ್ಲಿ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾದ ಮಂಡಿಸಲು ಆರಂಭಿಸುತ್ತಿದ್ದಂತೆ ಸಭಾನಾಯಕ ಎಸ್.ಆರ್.ಪಾಟೀಲ್ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರ ವಿರುದ್ಧ ಆಕ್ರೋಶದ ಹೇಳಿಕೆಗಳು ಬರಲಾರಂಭಿಸಿದವು. ಪ್ರಶ್ನೋತ್ತರದ ನಂತರ ಈ ಸಮಸ್ಯೆ ಬಗ್ಗೆ ಚರ್ಚಿಸೋಣ, ಸರ್ಕಾರ ಸಿದ್ಧವಾಗಿದೆ ಎಂದು ಪಾಟೀಲ್ ಭರವಸೆ ನೀಡಿದರು.
ರಾಜ್ಯದಲ್ಲಿ ಅತ್ಯಾಚಾರಕ್ಕಿಂತ ಸದನದ ಶಿಷ್ಟಾಚಾರ, ನಿಯಮವೇ ಮುಖ್ಯವಾಗುತ್ತಿದೆ. ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ ಎಂದು ತಿಳಿದುಕೊಂಡು ಆತ್ಮಸಾಕ್ಷಿಯಿಂದ ಮಾತನಾಡಿ. ಸರ್ಕಾರ ಟೀಕಿಸಲು ಚರ್ಚೆ ನಡೆಸುತ್ತಿಲ್ಲ, ಬದಲಾಗಿ ಸರ್ಕಾರಕ್ಕೆ ಸಲಹೆ ನೀಡುತ್ತೇವೆ. ಆದರೆ ಸರ್ಕಾರಕ್ಕೆ ಇದು ಇಷ್ಟವಿಲ್ಲ. ಅತ್ಯಾಚಾರಿಗಳಿಗೆ ಪರೋಕ್ಷವಾಗಿ ರಕ್ಷಣೆ ನೀಡಲಾಗುತ್ತಿದೆ ಎಂದು ಈಶ್ವರಪ್ಪ ಆಕ್ರೋಶವ್ಯಕ್ತಪಡಿಸಿದರು.