ಬೆಂಗಳೂರು: ಹಲಸಿನ ಹಣ್ಣಿನ ವ್ಯಾಪಾರಿಯೊಬ್ಬ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವೈಯ್ಯಾಲಿಕಾವಲ್ನಲ್ಲಿ ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ರಮೇಶ್ ಎಂಬಾತನನ್ನು (30) ಬಂಧಿಸಿದ್ದಾರೆ.
ವೈಯಾಲಿಕಾವಲ್ನಲ್ಲಿ ಹಲಸಿನ ಹಣ್ಣು ಮಾರಾಟ ಮಾಡುವ ರಮೇಶ್ನಿಗೆ 3 ವರ್ಷಗಳ ಹಿಂದೆ ಮದುವೆಯಾಗಿದ್ದು ಒಂದೂವರೆ ವರ್ಷದ ಮಗುವಿದೆ. ಆದರೆ, ಕಳೆದ ಒಂದು ವರ್ಷದಿಂದ ಸ್ಥಳೀಯ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಬಳಿಕ ತನಗೆ ಮದುವೆಯಾಗಿಲ್ಲ ಎಂದು ಹೇಳಿ ಪ್ರೀತಿಸಲು ಆರಂಭಿಸಿದ್ದ. ಇದನ್ನು ನಂಬಿದ ಯುವತಿ ರಮೇಶನನ್ನು ಪ್ರೀತಿಸುತ್ತಿದ್ದಳು. ಪ್ರೀತಿಯನ್ನೇ ದುರುಪಯೋಗಪಡಿಸಿಕೊಂಡ ಆರೋಪಿ ರಮೇಶ್, ಕಳೆದ ಐದು ತಿಂಗಳುಗಳಿಂದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಇತ್ತೀಚೆಗೆ ವೈದ್ಯರ ಬಳಿ ಹೋದಾಗ ಯುವತಿ ಐದು ತಿಂಗಳ ಗರ್ಭಿಣಿ ಎನ್ನುವುದು ಗೊತ್ತಾಗಿದೆ. ಈ ಸಂಬಂಧ ಪೋಷಕರು ಪ್ರಶ್ನಿಸಿದಾಗ ಯುವತಿ ಪ್ರೀತಿಯ ವಿಷಯ ಬಹಿರಂಗಪಡಿಸಿದ್ದಾಳೆ.
ತಂದೆ ಅನಾರೋಗ್ಯ ಪೀಡಿತರಾಗಿದ್ದು ತಾಯಿ ಮನೆಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯುವತಿಯ ಪೋಷಕರು ರಮೇಶನಿಗೆ ಮದುವೆಯಾಗುವಂತೆ ಕೋರಿದ್ದಾರೆ. ಆಗ ರಮೇಶ್, ತನಗೆ ಮದುವೆಯಾಗಿದ್ದು ಒಂದು ಮಗುವಿದೆ ಎಂದು ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವೈಯಾಲಿಕಾವಲ್ ಪೊಲೀಸರು ಆರೋಪಿಯನ್ನು ಬಂಧಿಸಿ, ಇಬ್ಬರನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದಾರೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ, ಬಂಧನ
ಅಪ್ರಾಪ್ತ ಯುವತಿಯನ್ನು (15) ಅಪಹರಿಸಿ ಮದುವೆ ಮಾಡಿಕೊಂಡು ಅತ್ಯಾಚಾರ ಎಸಗಿದ ಪೀಣ್ಯ ಆಶ್ರಯ ನಗರ ನಿವಾಸಿ ಚಂದ್ರು(23) ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಚಂದ್ರು ವಾರದ ಹಿಂದೆ ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದ. ಪೋಷಕರಿಗೆ ತಿಳಿಸಿದೆ ಮದುವೆಯಾಗಿದ್ದ ಆರೋಪಿ, ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಈ ಸಂಬಂಧ ಯುವತಿ ಪೋಷಕರು ಅಪಹರಣ ದೂರು ದಾಖಲಿಸಿದ್ದರು. ಆರೋಪಿಯನ್ನು ಬಂಧಿಸಿ ಯುವತಿಯನ್ನು ರಕ್ಷಿಸಿ ಪೊಲೀಸರು ನಗರಕ್ಕೆ ಕರೆತಂದಿದ್ದಾರೆ.