ಬೆಂಗಳೂರು: ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಅನುದಾನ, ಅಕ್ಕಸಾಲಿಗರ ಮೇಲೆ ಪೊಲೀಸ್ ದೌರ್ಜನ್ಯ ತಡೆಗಟ್ಟಲು ಪ್ರತ್ಯೇಕ ಕಾನೂನು, ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.
ಮಲ್ಲೇಶ್ವರ ಮೈದಾನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿದ ಮಹಾಸಭಾದ ಸದಸ್ಯರು, ಕಳೆದ 14 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ವಿಶ್ವಕರ್ಮ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಸಮಾಜದ ಮುಖ್ಯವಾಹಿನಿಗೆ ಬರದ ಸಮುದಾಯವನ್ನು ಸಾಮಾಜಿಕವಾಗಿ ತುಳಿಯಲಾಗುತ್ತಿದೆ. ರಾಜ್ಯ ಸರ್ಕಾರ ವಿಶ್ವಕರ್ಮ ಸಮುದಾಯದ ಬೆಳವಣಿಗೆಗೆ ಪೂರ್ಣ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮಹಾಸಭಾದ ರಾಜ್ಯ ಯುವಘಟಕದ ಅಧ್ಯಕ್ಷ ಆರ್.ಶ್ರೀನಿವಾಸ್ ವಿಶ್ವಕರ್ಮ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ವಿಶ್ವಕರ್ಮ ಅಭಿವೃದ್ಧಿ ನಿಗಮ ಮಾತ್ರ ಸ್ಥಾಪಿಸುವ ಮೂಲಕ ಕೇವಲ ಒಂದು ಬೇಡಿಕೆ ಮಾತ್ರ ಈಡೇರಿಸಲಾಗಿದೆ. ನಿಗಮಕ್ಕೆ 5 ಕೋಟಿ ನೀಡಿದ್ದು, ಈ ಮೊತ್ತವನ್ನು 50 ಕೋಟಿಗೆ ಹೆಚ್ಚಿಸಬೇಕು. ಸಮುದಾಯವನ್ನು ಹಿಂದುಳಿದ ವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು. ಚಿನ್ನ, ಬೆಳ್ಳಿ ಕೆಲಸ ಮಾಡುವವರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಸಮುದಾಯದ ಮೂಲ ಕಸುಬನ್ನು ನಡೆಸಲು ವಿಶ್ವಕರ್ಮರು ಹಿಂಜರಿಯುತ್ತಿದ್ದಾರೆ. ಹೀಗಾಗಿ ದೌರ್ಜನ್ಯ ನಿಯಂತ್ರಿಸಲು ಪ್ರತ್ಯೇಕ ಕಾನೂನು ತರಬೇಕು.
ಪ್ರತಿ ವರ್ಷ ಸೆಪ್ಟೆಂಬರ್ 17ರ ವಿಶ್ವಕರ್ಮ ಜಯಂತಿಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯ ರಸ್ತೆ ವೃತ್ತಕ್ಕೆ 'ಅಮರಶಿಲ್ಪಿ ಜಕಣಾಚಾರಿ' ಹೆಸರಿಡಬೇಕು ಎಂದರು.
ರಾಜಕೀಯ ಸ್ಥಾನ: ಹಿಂದಿನಿಂದಲೂ ವಿಶ್ವಕರ್ಮರು ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂದು ದೂರಿದ ಅವರು, ಗ್ರಾಮ ಪಂಚಾಯಿತಿಯಿಂದ ಆರಂಭವಾಗಿ ರಾಜ್ಯಸಭೆ ತಲುಪುವವರೆಗೂ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಅವರಿಗೆ ರಾಜಕೀಯದಲ್ಲಿ ಸ್ಥಾನ ನೀಡಿ ಸಮುದಾಯ ಬಲಗೊಳ್ಳುವಂತೆ ಮಾಡಬೇಕು ಎಂದರು. ರಾಜ್ಯ ಮಹಿಳಾ ಘಚಕದ ಅಧ್ಯಕ್ಷೆ ಆರ್.ವಿ.ಭಾಗ್ಯಮ್ಮ, ಹಿರಿಯ ಮುಖಂಡ ಕೆ.ಎನ್.ಶ್ರೀಧರಾಚಾರ್ ಇದ್ದರು.
ವಿಶ್ವಕರ್ಮರನ್ನು ಎಸ್ಟಿಗೆ ಸೇರಿಸಿ: ನಂಜುಂಡಿ
ಬೆಳಗಾವಿ: ವಿಶ್ವಕರ್ಮ ಸಮಾಜವು ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳಿಂದ ವಂಚಿತವಾಗಿದ್ದು, ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ)ಗೆ ಸೇರಿಸಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಆಗ್ರಹಿಸಿದರು.
ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಸಮಾಜ ಬಾಂಧವರು ಕೀಳರಿಮೆ ಹೊಂದುವುದು ಬೇಡ. ಸೆ. 17ರಂದು ನಡೆಯಲಿರುವ ವಿಶ್ವಕರ್ಮ ಜಯಂತಿ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಹಿಂದುಳಿದ ವರ್ಗದಲ್ಲಿ 103 ಜಾತಿಗಳಿವೆ. ಇದರಲ್ಲಿ ಬಲಿಷ್ಠವಾಗಿರುವ ಸಮಾಜಗಳು ರಾಜಕೀಯವಾಗಿ ಮುಂದೆ ಬಂದಿದ್ದು, ಸರ್ಕಾರಿ ಸೌಲಭ್ಯಗಳನ್ನ್ನು ಪಡೆದುಕೊಳ್ಳುತ್ತಿವೆ ಎಂದರು.
ಸರ್ಕಾರಿ ರಜೆಗೆ ಒತ್ತಾಯ: ವಿಶ್ವಕರ್ಮ ಜಯಂತಿಗೆ ಸೆ.17ರಂದು ಪ್ರತಿವರ್ಷ ಸರ್ಕಾರಿ ರಜೆ ಘೋಷಿಸಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಬಿಡುಗಡೆ ಮಾಡಿ ಅಧ್ಯಕ್ಷರನ್ನ್ನು ನೇಮಿಸಬೇಕು ಎಂದರು.