ತನ್ನ ಹಕ್ಕಿಗೇ ಹೋರಾಡಬೇಕೇ ಈ ಆಯೋಗ?

Updated on: 

ಶಶಿರೇಖಾ ಜಿ.ಕೆ.
ಬೆಂಗಳೂರು: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೇ ಸರಿಯಾಗಿ ಹಕ್ಕುಗಳನ್ನು ನೀಡಲಾಗಿಲ್ಲ! ಹೀಗಾಗಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹೋರಾಡಬೇಕಾದವರು ತಮ್ಮ ಹಕ್ಕುಗಳಿಗಾಗಿಯೇ ಹೋರಾಡುವಂತಾಗಿದೆ.
ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು ಸದಸ್ಯರು ಮತ್ತು ಅಧ್ಯಕ್ಷರು ಅಧಿಕಾರ ಮತ್ತು ಸೌಲಭ್ಯಗಳಿಲ್ಲದೇ, ಹಲ್ಲುಕಿತ್ತ ಹಾವಿನಂತಾಗಿದ್ದಾರೆ.
ಇದಕ್ಕೆ ಹಲ್ಲು ನೀಡಬೇಕಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಬೇರೆ ಇಲಾಖೆಗಳ ಬಗ್ಗೆ ಪತ್ರ ಬರೆದುಕೊಂಡು ಕುಳಿತಿದ್ದಾರೆ. ಆಯೋಗವೇ ಸೊರಗುತ್ತಿದ್ದರೆ ಅದು ರಾಜ್ಯದಲ್ಲಿರುವ 2.5 ಕೋಟಿ ಮಕ್ಕಳ ಹಕ್ಕಗಳ ರಕ್ಷಣೆ ಮಾಡಲು ಹೇಗೆ ಸಾಧ್ಯ ಎನ್ನುವುದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಯೋಚಿಸಬೇಕು.
ಪುಷ್ಟಿ ತುಂಬಬೇಕು: ಆಯೋಗಕ್ಕೆ ಅಧ್ಯಕ್ಷರು ಮತ್ತು 6 ಮಂದಿ ಸದಸ್ಯರಿದ್ದಾರೆ. ಅಧ್ಯಕ್ಷರು ಮಾತ್ರ ಪೂರ್ಣಾವಧಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ 75 ಸಾವಿರ ಗೌರವಧನ, 15 ಸಾವಿರ ಬಾಡಿಗೆ, ಕಾರು ಮತ್ತು ದೂರವಾಣೆ ಮತ್ತಿತರ ವೆಚ್ಚಗಳನ್ನು ಸರ್ಕಾರ ಭರಿಸುತ್ತದೆ. ಉಳಿದ 6 ಮಂದಿ ಸದಸ್ಯರಿಗೆ ಗೌರವಧನವಿಲ್ಲ, ಅಧಿಕಾರವಿಲ್ಲ, ಸಹಾಯಕ ಸಿಬ್ಬಂದಿಯಿಲ್ಲ, ತಿಂಗಳಿಗೆ ಕೇವಲ ಹತ್ತು ದಿನದ ಪ್ರಯಾಣದ ಖರ್ಚನ್ನು(ಬಸ್ ದರ) ಮಾತ್ರ ನೀಡಲಾಗುತ್ತದೆ. ಡಿಎ ಕೊಟ್ಟರೂ ಯಾವುದಕ್ಕೂ ಸಾಕಾಗುವುದಿಲ್ಲ. ಇದಾರಿಂದಾಗಿ ಮಕ್ಕಳ ಹಕ್ಕುಗಳ ಆಯೋಗವೇ ಕುಪೋಷಣೆಗೆ ಒಳಗಾಗಿದೆ!
ಸದಸ್ಯರನ್ನು ಪೂರ್ಣಾವಧಿ ಕಾರ್ಯ ನಿರ್ವಹಿಸಲು ನೇಮಕಾತಿ ಮಾಡಿಕೊಂಡಿಲ್ಲ. ಸಭೆಗಳಿದ್ದಾಗ ಅವರು ಭಾಗವಹಿಸುತ್ತಾರೆ. ಕನಿಷ್ಠ ದೂರವಾಣಿ ವೆಚ್ಚ ಸಹ ಭರಿಸುತ್ತಿಲ್ಲ. ಸ್ವಂತ ಖರ್ಚಿನಿಂದ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯವೇ? ಸದಸ್ಯರಿಗೆ ಸಹಾಯಕರಿಲ್ಲದ ಕಾರಣ ಪ್ರಕರಣಗಳ ಬೆಳವಣಿಗೆಗಳನ್ನು ಗಮನಿಸಲು ಸಾಧ್ಯವಾಗುವುದಿಲ್ಲ.
ಆಯೋಗ ಸ್ವಾಯತ್ತ ಸಂಸ್ಥೆಯಾದರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅನುದಾನ ಪಡೆಯಬೇಕು. ಜಿಲ್ಲೆಗಳಲ್ಲಿ ಪ್ರಕರಣಗಳ ತನಿಖೆ ಮಾಡಲು ಹೊರಟಾಗ ಇಲಾಖೆಯ ವಾಹನ ಬಳಸಬೇಕು. ಇಲ್ಲದಿದ್ದಲ್ಲಿ ಸದಸ್ಯರು ಬಸ್‌ನಲ್ಲಿ ಪ್ರಯಾಣಿಸಿ ಸಮಸ್ಯೆಗಳನ್ನು ಪರಿಶೀಲಿಸಬೇಕು. ಇಲಾಖೆಯ ವಾಹನ ಮತ್ತು ಸವಲತ್ತುಗಳನ್ನು ಆಯೋಗ ಬಳಸಿಕೊಳ್ಳುವುದರಿಂದ ಇಲಾಖೆಯದ್ದೇ ಲೋಪದೋಷಗಳಿದ್ದಾಗ ವಸ್ತುನಿಷ್ಠ ವರದಿ ನೀಡುವುದು ಹೇಗೆ ಸಾಧ್ಯ?
ಮಕ್ಕಳ ಕುರಿತ ಸಂಶೋಧನಾ ತಜ್ಞರು ಮತ್ತು ಕಾನೂನು ತಜ್ಞರಿಲ್ಲ. ಆದರೂ, ಮಕ್ಕಳ ಜೀವಿಸುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸದ ಹಕ್ಕು, ಭಾಗವಹಿಸುವ ಹಕ್ಕು(ಮಕ್ಕಳ ವಿಚಾರಧಾರೆಗೆ ಆದ್ಯತೆ ಸಿಗುವ ಹಾಗೆ ನೋಡಿಕೊಳ್ಳುವುದು) ಕುರಿತು ನಿಗಾ ವಹಿಸುವ ಜವಾಬ್ದಾರಿ ಆಯೋಗ ಹೊತ್ತಿದೆ.
ನಾಮ್‌ಕೆವಾಸ್ತೆ ಸದಸ್ಯರು: ಆಯೋಗದ ಸದಸ್ಯರು ಜಿಲ್ಲೆಗಳಿಗೆ ತೆರಳಿದಾಗ ಸಭೆ ಕರೆಯುವಂತಿಲ್ಲ. ಅಧ್ಯಕ್ಷರೊಂದಿಗೆ ಹೋದಾಗ ಮಾತ್ರ ಸಭೆ ನಡೆಯುತ್ತದೆ. ಹಾಗೆಂದ ಮೇಲೆ ಸದಸ್ಯರು ಹೋಗಿ ಪರಿಶೀಲಿಸಿದರೂ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸೂಚನೆ ನೀಡುವ ಅಧಿಕಾರವಿಲ್ಲ. ಹಾಗಾದರೆ ಕೇವಲ ಅಧ್ಯಕ್ಷರೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಲ್ಲರೇ? ಅಧಿಕಾರ ವಿಕೇಂದ್ರೀಕರಣವಾದಾಗ ವ್ಯವಸ್ಥೆ ಚುರುಕಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಇಲ್ಲಿ ಸದಸ್ಯರು ಕೇವಲ ನಾಮ್‌ಕೆವಾಸ್ತೆ ಇದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತಿತರ ಯಾವುದೇ ಇಲಾಖೆಯಡಿ 18 ವರ್ಷದೊಳಗಿನ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದಾಗ ಇಲಾಖೆ ಕೂಡಲೇ ಕಾರ್ಯ ಪ್ರವೃತ್ತವಾಗುತ್ತದೆ. ಪ್ರತಿ ಸದಸ್ಯರು 4-6 ಜಿಲ್ಲೆಗಳ ಮಕ್ಕಳ ಹಕ್ಕುಗಳನ್ನು ಕಾಪಾಡಬೇಕು. ಇಷ್ಟು ದೊಡ್ಡ ಹೊಣೆಯಿರುವ ಸಂಸ್ಥೆಗೆ ಮೂಲಸೌಕರ್ಯ ಮತ್ತು ಸಿಬ್ಬಂದಿ ಕೊರತೆ ಕಾಡುತ್ತಿದೆ. ಜತೆಗೆ ಆಯೋಗಕ್ಕೆ, ಸರ್ಕಾರಕ್ಕೆ ವರದಿ ನೀಡುವ ಹಕ್ಕು ಮಾತ್ರ ಇದೆ. ಯಾವುದೇ ನಿರ್ಣಯ ಕೈಗೊಳ್ಳುವ ಅಧಿಕಾರವಿಲ್ಲ. ಹಾಗಾಗಿ ಅಂತಿಮವಾಗಿ ಸಮಸ್ಯೆಗೆ ಸಂಬಂಧಿಸಿಂತೆ ಸರ್ಕಾರವೇ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗುತ್ತದೆ.
ಆಂಧ್ರಪ್ರದೇಶ, ಕೇರಳ, ಬಿಹಾರ, ತಮಿಳುನಾಡು, ಒಡಿಶಾ ಮತ್ತು ಬಿಹಾರದಲ್ಲಿ ಮಕ್ಕಳ ಆಯೋಗ ಪೂರ್ಣಾವಧಿ ಕಾರ್ಯ ನಿರ್ವಹಿಸುತ್ತದೆ. ಸದಸ್ಯರಿಗೆ ಅಧಿಕಾರ ಮತ್ತು ಪೂರಕ ಸಿಬ್ಬಂದಿ ಇದ್ದಾರೆ. ಸದಸ್ಯರ ಜಿಲ್ಲಾ ಪ್ರವಾಸಕ್ಕೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ರಾಜ್ಯದಲ್ಲಿ ಮಕ್ಕಳ ಮೇಲೆ ದಾಖಲೆಯ ಮಟ್ಟದಲ್ಲಿ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಆಯೋಗ ಬಲಗೊಳಿಸಲು ಮೀನಮೇಷ ಎಣಿಸುತ್ತಿದೆ.
ಇನ್ನಾದರೂ ಸರ್ಕಾರ ಜಡತ್ವವನ್ನು ಕಳೆದು ಕೊಂಡು, ಆಯೋಗ ಬಲಪಡಿಸುವತ್ತ ಇಚ್ಭಾಶಕ್ತಿ ಪ್ರದರ್ಶಿಸಿ, ಮಕ್ಕಳ ದನಿಯನ್ನು ಎತ್ತಿಹಿಡಿಯುವ ಸಂಸ್ಥೆಗೆ ಚೈತನ್ಯ ತುಂಬಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com