ಬೆಂಗಳೂರು: ಮಲೆನಾಡು ಭಾಗದಲ್ಲಿ ರೈತರು ಹೆಚ್ಚಾಗಿ ಬೆಳೆಯುತ್ತಿರುವ ಶುಂಠಿ, ಕೃಷಿಗೆ ಮಾರಕವಾಗತೊಡಗಿದೆ. ಈ ಬೆಳೆಗೆ ಯಥೇಚ್ಛವಾಗಿ ಬಳಸುತ್ತಿರುವ ಕ್ರಿಮಿನಾಶಕವು ಪರಿಸರಸ್ನೇಹಿ ಜೀವಿಗಳನ್ನು ಬಲಿತೆಗೆದುಕೊಳ್ಳತೊಡಗಿದೆ. ಜನ-ಜಾನುವಾರುಗಳು ಕುಡಿಯುವ ಜಲದ ಮೂಲಗಳು ವಿಷಮಯವಾಗುತ್ತಿವೆ. ಅಲ್ಲದೆ, ಭಾರಿ ಪ್ರಮಾಣದಲ್ಲಿ ಕ್ರಿಮಿನಾಶಕ ಬಳಸುತ್ತಿರುವುದರಿಂದ ರೈತರ ಆರೋಗ್ಯದ ಮೇಲೂ ಭೀಕರವಾದ ಪರಿಣಾಮಗಳು ಉಂಟಾಗುತ್ತಿವೆ. ಶುಂಠಿ ಬೆಳೆಯಿಂದಾದ ಅನಾಹುತಗಳ ಕುರಿತು ಪರಿಸರವಾದಿ ವೃಕ್ಷಲಕ್ಷ ಆಂದೋಲನ ಸಂಘಟನೆ ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶಗಳು ಬಯಲಾಗಿವೆ. ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪತ್ರಿಕಾಗೋಷ್ಠಿಯಲ್ಲಿ ಸಮೀಕ್ಷಾ ವರದಿಯ ಅಂಶಗಳನ್ನು ಬಹಿರಂಗಪಡಿಸಿದರು. ಸರ್ಕಾರವು ರೈತರು ಮತ್ತು ಕೃಷಿ ಭೂಮಿ ಸಂರಕ್ಷಣೆಯ ದೃಷ್ಟಿಯಿಂದ ತಕ್ಷಣವೇ ಇತ್ತ ಗಮನ ಹರಿಸಬೇಕಿದೆ. ತಜ್ಞರ ಸಮಿತಿ ರಚನೆ ಮಾಡುವ ಮೂಲಕ ಶುಂಠಿ ಬೆಳೆಯುವ ಪ್ರದೇಶದ ನಿಖರ ಮಾಹಿತಿ ಸಂಗ್ರಹಿಸಬೇಕು. ನಿಷೇಧಿತ ಕೀಟನಾಶಕ ಬಳಕೆಗೆ ಕಡಿವಾಣ ಹಾಕಬೇಕು. ರೈತರನ್ನು ಶೋಷಣೆ ಮಾಡುತ್ತಿರುವ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸಾವಯವ ಪದ್ಧತಿಯಲ್ಲಿ ಶುಂಠಿ ಬೆಳೆಯಲು ಪ್ರೋತ್ಸಾಹ ನೀಡಬೇಕುಎಂದು ಅಶೀಸರ ಆಗ್ರಹಿಸಿದರು. ಸಂಘಟನೆಯ ಸಂಚಾಲಕ ಬಿ.ಎಚ್. ರಾಘವೇಂದ್ರ ಹಾಜರಿದ್ದರು.