
ಬೆಂಗಳೂರು: ಅಪರಿಚಿತ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಕಲಾಸಿಪಾಳ್ಯದ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ ಮುಂಡವನ್ನು ಎಸೆದು ಪರಾರಿಯಾಗಿದ್ದಾರೆ.
ಸುಮಾರು 30 ವರ್ಷದ ವ್ಯಕ್ತಿಯ ತಲೆ ಮತ್ತು ಕೈ ಕಾಲುಗಳು ಇಲ್ಲದ ಎದೆ ಭಾಗ ಮಾತ್ರ ಪತ್ತೆಯಾಗಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ನಾಯಿಗಳು ಮೂಟೆಯನ್ನು ಎಳೆದು ಹಾಕಿವೆ. ಇದನ್ನು ಗಮನಿಸಿದ ಸ್ಥಳೀಯರು ಮೂಟೆ ತೆರೆದು ನೋಡಿದಾಗ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೇರೆ ಕಡೆ ಕೊಲೆ ಮಾಡಿ ಗುರುತು ಸಿಗಬಾರದೆಂದು ತಲೆ ಮತ್ತು ಕೈ ಕಾಲು ಕತ್ತರಿಸಿ ಎದೆಭಾಗ ಮಾತ್ರ ಚೀಲದಲ್ಲಿ ಕಟ್ಟಿ ತಂದು ಬಿಸಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಇಲ್ಲಿನ ಆರ್.ಕೆ ಲಾಡ್ಜ್ ಸಮೀಪ ಅನುಮಾನಾಸ್ಪದವಾಗಿ ಇನ್ನೋವಾ ಕಾರು ನಿಂತಿತ್ತು. ಕಾರಿನಲ್ಲಿದ್ದವರೇ ಶವ ಎಸೆದು ಹೋಗಿರುವ ಶಂಕೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ನಾಪತ್ತೆಯಾದವರ ವಿವರ ಕೊಡುವಂತೆ ಎಲ್ಲ ಠಾಣೆಗಳಿಗೆ ಸೂಚಿಸಲಾಗಿದೆ. ಅಲ್ಲದೆ ಶವ ಸಿಕ್ಕ ಸ್ಥಳದ ಸುತ್ತಮುತ್ತಲಿನ ಕಟ್ಟಡಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Advertisement