
ಬೆಂಗಳೂರು: ಆರ್ಕಿಡ್ ಹೂವಿನ ಶ್ರೀಮಂತ ಸೊಬಗು ನೋಡುವುದೇ ಒಂದು ಮನೋಲ್ಲಾಸ. ಒಂದೇ ಒಂದು ಆರ್ಕಿಡ್ ಹೂವು ಕಂಡರೆ ಸಾಕು, ಮನಸ್ಸು ಉಲ್ಲಸಿತಗೊಳ್ಳುತ್ತದೆ. ಹಾಗಿರುವಾಗ ನೂರಾರು ಬಣ್ಣ ಮತ್ತು ಹಲವು ವಿನ್ಯಾಸದ ಆಕರ್ಷಕ ಆರ್ಕಿಡ್‌ಗಳು ಒಂದೇ ಸೂರಿನಡಿ ಕಂಡರೆ?
ಆಹಾ, ಇಂಥ ಆರ್ಕಿಡ್ ಸೊಬಗಿಗೆ ಮತ್ತಷ್ಟು ಮೆರುಗು ನೀಡಲು ಅಕ್ಟೋಬರ್ ಮಧ್ಯಭಾಗದಲ್ಲಿ ಲಾಲ್‌ಬಾಗ್‌ಗೆ ಬಗೆ ಬಗೆಯ ಆರ್ಕಿಡ್ ಪುಷ್ಪಗಳು ಲಗ್ಗೆ ಇಡುತ್ತಿವೆ. ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕವು ಲಾಲ್‌ಬಾಗ್‌ನ ಡಾ. ಎಂ. ಎಚ್. ಮರಿಗೌಡ ಹಾಲ್‌ನಲ್ಲಿ ಅ. 17ರಿಂದ 19ರವರೆಗೆ ಸತತ ಮೂರು ದಿನಗಳ ಕಾಲ ಆರ್ಕಿಡ್ ಪುಷ್ಪಮೇಳ -2014ನ್ನು ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಆರ್ಕಿಡ್ ಪ್ರದರ್ಶನದ ತಯಾರಿ ನಡೆಯುತ್ತಿದೆ. ಆರ್ಕಿಡ್ ಬೆಳೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಬೆಳೆಯ ಬಗ್ಗೆ ಉತ್ತೇಜನ ನೀಡುವುದು ಮೇಳದ ಉದ್ದೇಶ.
ವೈಶಿಷ್ಟ್ಯ ಏನು?
ಫಲನೊಪ್ಸಿಸ್, ಕ್ಯಾಟ್ಲೆಯಾ ಡೆಂಡ್ರೋಬಿಯಂ, ವ್ಯಾಂಡಾ, ಪ್ಯಾಪಿಲೋ ಪೀಡಿಯಂ, ವೊಕಾರಾ ಹೀಗೆ ಹತ್ತಾರು ಬಗೆಯ ಕಾಡಿನ ಪುಷ್ಪಗಳು ಹಾಗೂ ಹೈಬ್ರಿಡ್ ಆರ್ಕಿಡ್ ಪುಷ್ಪಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿರುತ್ತದೆ. ನೃತ್ಯದಂತೆ(ಡಾನ್ಸಿಂಗ್ ಡಾಲ್), ಪಾದರಕ್ಷೆಯಂತೆ, ಮಂಗನಂತೆ(ಮಂಕಿ ಆರ್ಕಿಡ್ಸ್), ಜಿಂಕೆಯಂತೆ ಹೋಲುವ ಆರ್ಕಿಡ್‌ಗಳು ನೋಡುಗರನ್ನು ಬೆರಗುಗೊಳಿಸುತ್ತವೆ.
ಬೆಳೆಯಾಗಿ ಪರಿವರ್ತಿಸಿಕೊಳ್ಳಬಹುದಾದ ರೀತಿ, ಬೆಳೆಯ ವಿಧಾನ ಹಾಗೂ ಸಂರಕ್ಷಣೆ ಮಾಡುವ ವಿಧಾನದ ಬಗ್ಗೆ ಆರ್ಕಿಡ್ ಪುಷ್ಪಾಸಕ್ತರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತಾಂತ್ರಿಕ ಮಾಹಿತಿ ನೀಡಲಾಗುವುದು.
ಅಂದ ಹಾಗೆ ಪುಷ್ಪಗಳನ್ನು ನೋಡಿ ಕಣ್ತುಂಬಿಕೊಳ್ಳುವುದಷ್ಟೇ ಅಲ್ಲ, ನಿಮಗಿಷ್ಟವಾದ ಆರ್ಕಿಡ್ ಹೂವಿನ ಗಿಡಗಳನ್ನು ಖರೀದಿಸಿ ಮನೆಗೊಯ್ಯಬಹುದು. ಬೆಳೆಸುವ ವಿಧಾನ ಹಾಗೂ ಅದನ್ನು ಆರೈಕೆ ಮಾಡುವ ವಿಧಾನವನ್ನೂ ಆಯೋಜಕರಿಂದ ಪಡೆಯಬಹುದು.
- ನಯನಾ ಬಿ.ಜೆ
Advertisement