
ಬೆಂಗಳೂರು: ನೈತಿಕ ಪೊಲೀಸ್‌ಗಿರಿ ಮುಂದುವರಿಸಿದರೆ ರಾಜ್ಯದಲ್ಲೂ ಶ್ರೀರಾಮ ಸೇನೆಯನ್ನು ನಿಷೇಧಿಸಲಾಗುವುದು ಎಂದು ಗೃಹ ಸಚಿವ ಕೆ. ಜೆ ಜಾರ್ಜ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಶ್ರೀರಾಮಸೇನೆ ನೈತಿಕ ಪೊಲೀಸ್ ಗಿರಿ ಮಾಡುತ್ತಿದೆ. ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರೂ ಕೇಳಿಲ್ಲ. ಪರಿಸ್ಥಿತಿ ಹೀಗೆಯೇ ಮುಂದವರಿದರೆ ಸಂಘಟನೆ ನಿಷೇಧಿಸುವುದು ಅನಿವಾರ್ಯವಾಗುತ್ತದೆ ಎಂದರು.
ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಗೊಂದಲವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನ ಸೂತ್ರಗಳ ಆಧಾರದ ಮೇಲೆಯೇ ಬಿಡುಗಡೆ ಪ್ರಕ್ರಿಯೆ ನಡೆಯುತ್ತದೆ. ರಾಜ್ಯಪಾಲರ ಜತೆ ಸರ್ಕಾರ ಈ ವಿಚಾರದಲ್ಲಿ ಭಿನ್ನಮತ ಸೃಷ್ಟಿಸಿಕೊಂಡಿಲ್ಲ ಎಂದರು.
ರಾಜ್ಯ ವಿಭಜನೆ ಮಾಡುವಂತೆ ಮಾಜಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ ಮಾತ್ರಕ್ಕೆ ಕರ್ನಾಟಕ ಇಬ್ಭಾಗವಾಗುವುದಕ್ಕೆ ಸಾಧ್ಯವಿಲ್ಲ. ಅವರ ಹೇಳಿಕೆಗೆ ಯಾರು ಮಹತ್ವ ನೀಡಬೇಕಿಲ್ಲ ಎಂದು ಹೇಳಿದರು.
Advertisement