
ಬೆಂಗಳೂರು: ನಟಿ ಮೈತ್ರಿಯಾಗೌಡ ಅವರೊಂದಿಗೆ ನನ್ನ ಮದುವೆಯಾಗಿದೆ. ಆಕೆ ನನ್ನೊಂದಿಗೆ ಬಾಳುವಂತೆ ಸೂಚಿಸಿ ಎಂದು ನಿರ್ದೇಶಕ ರಿಷಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ನಿರ್ದೇಶಕ ರಿಷಿ, ನಟಿ ಮೈತ್ರಿಯಾ ಗೌಡ ವಿವಾಹ ವಿವಾದಕ್ಕೆ ಸಂಬಂಧಿಸಿದಂತೆ ರಿಷಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮೈತ್ರಿಯಾ ಗೌಡಳೊಂದಿಗೆ ನನ್ನ ಮದುವೆಯಾಗಿದ್ದು, ಆಕೆಯೊಂದಿಗೆ ನಾಲ್ಕು ತಿಂಗಳುಗಳ ಕಾಲ ಸಂಸಾರ ಮಾಡಿದ್ದೇನೆ. ಹೀಗಾಗಿ ನನ್ನೊಂದಿಗೆ ಬಾಳುವಂತೆ ಆಕೆಗೆ ಸೂಚಿಸಿ ಹಾಗೂ ವಿವಾಹದ ಹಕ್ಕು ಮರುಸ್ಥಾಪನೆ ಮಾಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮೈತ್ರಿಯಾ ಅವರನ್ನು 2004ರಲ್ಲಿ ನಾನು ಮದುವೆಯಾಗಿದ್ದೆ. ಅಲ್ಲದೆ ನಾಲ್ಕು ತಿಂಗಳ ಕಾಲ ಸಂಸಾರ ಕೂಡ ಮಾಡಿದ್ದೆ. ಬಳಿಕ ಆಕೆ ನನ್ನ ಬಳಿ ಇದ್ದ 2 ಲಕ್ಷ ರು.ಗಳನ್ನು ಅಪಹರಿಸಿ ನಾಪತ್ತೆಯಾಗಿದ್ದಳು. ಸಾಕಷ್ಟು ಬಾರಿ ನಾನು ಆಕೆಯನ್ನು ಹುಡುಕಲು ಪ್ರಯತ್ನಿಸಿದ್ದೆ. ಆದರೆ ಆಕೆ ನನ್ನ ಕೈಗೆ ಸಿಗುತ್ತಿರಲಿಲ್ಲ ಎಂದು ನಿರ್ದೇಶಕ ರಿಷಿ ಆರೋಪಿಸಿದ್ದಾರೆ.
'ಮೈತ್ರಿಯಾಳ ನಿಜವಾದ ಹೆಸರು ಶೃತಿಗೌಡ ಎಂದು. ಈ ಹಿಂದೆ ನಾನು 'ಸೂರ್ಯ ದಿ ಗ್ರೇಟ್' ಎಂಬ ಚಿತ್ರದಲ್ಲಿ ಆಕೆಯನ್ನು ಪರಿಚಯಿಸಿದ್ದೆ. ಚಿತ್ರೀಕರಣದ ವೇಳೆಯಲ್ಲೇ ನಾನು ಆಕೆಯನ್ನು ಪ್ರೀತಿಸಿದ್ದೆ. ಬಳಿಕ ಅಂದರೆ 2004ರ ಜುಲೈ 17ರಂದು ನಾನು ಮೈತ್ರಿಯಾಳನ್ನು ಮದುವೆಯಾಗಿದ್ದೆ. ಶೇಷಾದ್ರಿಪುರಂನ ಸನ್ಮಾನ್ ಲಾಡ್ಜ್‌ನಲ್ಲಿ ನಾನು ಮತ್ತು ಮೈತ್ರಿಯಾ ಗೌಡ ಮದುವೆಯಾಗಿದ್ದೆವು. ಅಲ್ಲದೆ ಲಾಡ್ಜ್‌ನಲ್ಲಿಯೇ ನಾಲ್ಕು ತಿಂಗಳು ಸಂಸಾರ ನಡೆಸಿದ್ದೆವು. ನಂತರ ಆಕೆ ಇದಕ್ಕಿದ್ದಂತೆಯೇ ನಾಪತ್ತೆಯಾಗಿದ್ದಳು ಎಂದು ರಿಷಿ ದೂರಿದ್ದರು.
8ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಟಿ ಮೈತ್ರಿಯಾ ವಿರುದ್ಧ ವಂಚನೆ, ಕೊಲೆ ಬೆದರಿಕೆ ಮತ್ತು ಕಳ್ಳತನ ಆರೋಪದಡಿ ದೂರು ದಾಖಲಿಸಿದ್ದರು.
Advertisement