
ಬೆಂಗಳೂರು: ಸರ್ಕಾರಿ ಉರ್ದು ಶಾಲೆಯ 150ಕ್ಕೂ ಹೆಚ್ಚು ಮಕ್ಕಳು ಶುಕ್ರವಾರ ಬಿಸಿಯೂಟ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಾ ಮಕ್ಕಳು ಪ್ರಾಣಾಪಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿರುವ ಉರ್ದು ಶಾಲೆಯ ಮಕ್ಕಳು ಇಂದು ಮಧ್ಯಾಹ್ನ ಬಿಸಿಯೂಟ ಸೇವಿಸಿದ ನಂತರ ತೀವ್ರ ಅಸ್ವಸ್ಥರಂತೆ ಕಂಡುಬಂದರು. ಕೂಡಲೇ ಅವರನ್ನು ಕಾವಲ್‌ಬೈರಸಂದ್ರದಲ್ಲಿರುವ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದ್ದು, ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆದರೆ, ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಜಮಾಸಿದ ನೂರಾರು ಪೋಷಕರು, ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲವೆಂದು ಆರೋಪಿಸಿ, ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಆಸ್ಪತ್ರೆಯ ಬಳಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ಪೋಷಕರು, ಘಟನೆಗೆ ಶಾಲಾ ಮುಖ್ಯಸ್ಥರೇ ನೇರ ಹೊಣೆ ಎಂದು ದೂರಿದರು. ಆದರೆ ಈ ಶಾಲಾ ಮಕ್ಕಳಿಗೆ ಇಸ್ಕಾನ್ ಸಂಸ್ಥೆಯೂ ಬಿಸಿಯೂಟ ಪೂರೈಕೆ ಮಾಡುತ್ತಿದ್ದು, ಊಟದಲ್ಲಿ ಹಲ್ಲಿ ಬಿದ್ದಿರುವುದು ಘಟನೆಗೆ ಕಾರಣ ಎನ್ನಲಾಗುತ್ತಿದೆ.
Advertisement