
ಬೆಂಗಳೂರು: ನವರಾತ್ರಿ ಬಂದಿದೆ. ಮನೆಮನೆಯಲ್ಲೂ ಸಂಭ್ರಮದ ವಾತಾವರಣ. ಗೊಂಬೆ ಕೂರಿಸುವ ಕಾರ್ಯಕ್ಕೆ ಜನರು ಹುರುಪಿನಿಂದ ಅಣಿಯಾಗಿದ್ದಾರೆ. ಒಂದೆಡೆ ಸಾಂಪ್ರದಾಯಿಕ ಆಚರಣೆಗೆ ಒತ್ತು ಲಭಿಸುತ್ತಿದ್ದರೆ, ಇನ್ನೊಂದೆಡೆ ಗೊಂಬೆ ಕೂರಿಸುವ ಕಾರ್ಯದಲ್ಲೂ ಆಧುನಿಕತೆಯ ಪ್ರವೇಶ ಆಗುತ್ತಿದೆ.
ಪಟ್ಟದ ಗೊಂಬೆ, ಮೈಸೂರಿನ ರಾಜ ಮನೆತನ, ಶ್ರೀಕೃಷ್ಣ, ಶೆಟ್ರು-ಶೆಟ್ರಮ್ಮನ ವ್ಯಾಪಾರ, ಮದುವೆ ಸೆಟ್, ಬಳೆಗಾರರ ಸೆಟ್‌ನಲ್ಲಿ ಬಳೆ ತೊಂಡಿಸಿಕೊಳ್ಳುತ್ತಿರುವ ಮುತ್ತೈದೆಯರು, ತುಳಿಸಿ ಪೂಜಾ ಸೆಟ್, ರಾಮಾಯಣ-ಮಹಾಭಾರತದ ದೃಶ್ಯಗಳು, ರೈತರ ಕೃಷಿ, ಸೈನಿಕರ ದಂಡು, ಪದಾತಿ ದಳ, ಆನೆಗಳು ಹೀಗೆ ಅವರವರ ಭಾವ, ಭಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ನಾಗರಿಕರು ಗೊಂಬೆಗಳನ್ನು ಹೊಂದಿರುತ್ತಾರೆ. ಹೊಸದನ್ನು ಸೇರಿಸುತ್ತಾರೆ.
ಈ ದಿನಗಳಲ್ಲಿ ಭಾರತೀಯರು, ಅದರಲ್ಲೂ ಯುವ ಜನಾಂಗ ವಿದೇಶಿ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗೊಂಬೆ ಪ್ರದರ್ಶನಗಳ ಮೂಲಕ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳು ಹಾಗೂ ಧಾರ್ಮಿಕ ಹಿನ್ನೆಲೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹೀಗಾಗಿ ನವರಾತ್ರಿಯಂದು ಕೂರಿಸುವ ಗೊಂಬೆಗಳನ್ನು ಗ್ರಾಹಕರ ಬೇಡಿಕೆ ಮತ್ತು ಅಭಿರುಚಿಗೆ ತಕ್ಕಂತೆ ಕೈಗೆಟುಕುವ ಬೆಲೆಗೆ ಮಾಡಿಕೊಟ್ಟಿದ್ದೇನೆ ಎನ್ನುತ್ತಾರೆ ಸ್ವಪ್ನಾ.
ನವರಾತ್ರಿಯಲ್ಲಿ ಕೂರಿಸುವ ಪ್ರತಿ ಗೊಂಬೆಗೂ ಒಂದೊಂದು ಅರ್ಥ, ಹಿನ್ನೆಲೆಯಿದೆ. ಮಣ್ಣಿನ ಗೊಂಬೆಗಳು ತುಂಬಾ ಶ್ರೇಷ್ಠ. ಆದರೆ ಇವುಗಳನ್ನು ಜೋಪಾನ ಮಾಡುವುದು ಕಷ್ಟ. ಹೀಗಾಗಿ ಹತ್ತಿ, ಉಲ್ಲನ್, ಲೇಸ್, ಬಟ್ಟೆ, ಚುಮಕಿ, ನೆಕ್ಕಿ ಉಪಯೋಗಿಸಿ ತಯಾರಿಸುವ ಗೊಂಬೆಗಳಿಗೆ ಬೇಡಿಕೆ ಅಧಿಕ. ಗೊಂಬೆ ತಯಾರಿಕೆಯನ್ನು ಈಗ ಒಂದು ಉದ್ಯಮವಾಗಿ ಮಾಡಿಕೊಂಡಿರುವುದಾಗಿ ಸ್ವಪ್ನಾ ಹೆಮ್ಮೆಯಿಂದ ಹೇಳುತ್ತಾರೆ.
ಗೊಂಬೆ ಪ್ರದರ್ಶನ: ಮಹಾಲಯ ಅಮಾವಾಸ್ಯೆಯ ಮರುದಿನ (ಅಶ್ವಯುಜ ಶುದ್ಧ ಪ್ರಥಮದಿಂದ ದಶಮಿಯವರೆಗೆ ಶರದೃತುವಿನಲ್ಲಿ) ಗೊಂಬೆಗಳನ್ನು ಕೂರಿಸಿ ಒಂಬತ್ತು ದಿನಗಳವರೆಗೆ ಪೂಜಿಸುವುದು ವಾಡಿಕೆ. 3,5,7,9, ಹೀಗೆ ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬೇಕು. ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯದಂತೆ ಪಟ್ಟದ ಗೊಂಬೆ, ಕಳಸ ಹಾಗೂ ಮಣ್ಣಿನ ಗೊಂಬೆಗಳಿಗೆ ಆದ್ಯತೆ ನೀಡಬೇಕು. ಉಳಿದಂತೆ ಅವರವರ ಅನುಕೂಲತೆ ತಕ್ಕಂತೆ ಗೊಂಬೆಗಳನ್ನು ಜೋಡಿಸಬಹುದು. ನವರಾತ್ರಿ ಗೊಂಬೆ ಪ್ರದರ್ಶನಕ್ಕೆ ಕೂರಿಸುವ ಗೊಂಬೆಗಳು ಇಂಥದ್ದೇ ಆಗಬೇಕೆಂಬ ಯಾವುದೇ ನಿಬಂಧನೆಯಿಲ್ಲ. ಮರದ ಗೊಂಬೆಗಳು, ರಟ್ಟು, ಮೆಟಲ್, ಮಣ್ಣು, ಪ್ಲಾಸ್ಟಿಕ್, ಫೈಬರ್, ಪಿಂಗಾಣಿ, ಮಣ್ಣು, ಪ್ಲಾಸ್ಟಿಕ್, ಫೈಬರ್, ಪಿಂಗಾಣಿ ಗಾಜು ಜತೆಗೆ ಆಧುನಿಕತೆಗೆ ತಕ್ಕಂತೆ ಚಲಿಸುವ ಗೊಂಬೆಗಳಿಗೂ ಅವಕಾಶವಿದೆ.
- ನಯನಾ ಬಿ.ಜೆ
Advertisement