
ಬೆಂಗಳೂರು: ಮದ್ಯದ ನಶೆಯಲ್ಲಿ ನಗರದ ಹೃದಯ ಭಾಗ ಸೇಂಟ್ ಮಾರ್ಕ್ಸ್ ರಸ್ತೆಯ ಒನ್ ವೇಯಲ್ಲಿ ಕಾರು ಚಲಾಯಿಸಿದ ಮಹಿಳೆಯೊಬ್ಬಳು ನಡುರಸ್ತೆಯಲ್ಲಿ ವಾಹನ ಸವಾರರು ಹಾಗೂ ಸಂಚಾರ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಹೈಡ್ರಾಮಾ ಸೃಷಿಸಿದ್ದಾಳೆ.
ವಾಯುಸೇನೆ ಅಧಿಕಾರಿಯ ಪತ್ನಿ ತನ್ನ ಕಾರಿನಲ್ಲಿ ಸಹೋದರ ಸಂಬಂಧಿ ಜತೆ ಶನಿವಾರ ರಾತ್ರಿ ಸೇಂಟ್ ಮಾರ್ಕ್ಸ್ ರಸ್ತೆಯ ಹಾರ್ಡ್ ರಾಕ್ ಕೆಫೆಗೆ ಬಂದಿದ್ದಳು. ಮದ್ಯದ ನಶೆಯಲ್ಲಿದ್ದ ಇಬ್ಬರೂ ಕಾರು ಚಲಾಯಿಸಿಕೊಂಡು ಒನ್ ವೇಯಲ್ಲಿ ನುಗಿದ್ದಾರೆ. ಆಗ ಮ್ಯೂಸಿಯಂ ರಸ್ತೆ ಕಡೆಯಿಂದ ಅನಿಲ್ ಕುಂಬ್ಳೆ ವೃತ್ತದ ಕಡೆ ಬರುತ್ತಿದ್ದ ಹಲವು ವಾಹನಗಳು, ಮಹಿಳೆ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಿವೆ. ಆದರೆ, ಸುಭಾಷ್ ಎನ್ನುವವರು ಕಾರನ್ನು ಗಮನಿಸಿ ತಮ್ಮ ಕಾರಿಗೆ ಬ್ರೇಕ್ ಹಾಕಿದ್ದಾರೆ. ಆದರೆ, ಹಿಂದಿನಿಂದ ಬರುತ್ತಿದ್ದ ಖಾಸಗಿ ವಾಹಿನಿಯ ಮತ್ತೊಂದು ಕಾರು ಸುಭಾಷ್ ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಕಾರಿನಿಂದ ಕೆಳಗಿಳಿದ ಸುಭಾಷ್, ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ತಮ್ಮ ಕಾರಿಗೆ ಆಗಿರುವ ಹಾನಿಯನ್ನು ಭರಿಸುವಂತೆ ಕೇಳಿದ್ದಾರೆ. ಈ ವೇಳೆ ಮಹಿಳೆ ಹಾನಿ ಭರಿಸಲು ನಿರಾಕರಿಸಿದ ಕಾರಣ ನಡುರಸ್ತೆಯಲ್ಲಿ ಹೈಡ್ರಾಮಾ ಆರಂಭವಾಗಿದೆ.
ಸ್ಥಳಕ್ಕೆ ಆಗಮಿಸಿದ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು, ಮದ್ಯಪಾನ ಮಾಡಿ ವಾಹನ ಚಾಲನೆ ಹಾಗೂ ಒನ್ ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾರು ಚಲಾಯಿಸಿದ್ದಕ್ಕೆ ದಂಡ ವಿಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರ . ಈ ವೇಳೆ ಇತರ ವಾಹನ ಸವಾರರು ಸೇರಿದ್ದರಿಂದ ಕಿರುಚಾಟ ಆರಂಭಿಸಿದ ಮಹಿಳೆ, ತಾನು ಏನೂ ತಪ್ಪು ಮಾಡಿಲ್ಲ ಎಂದು ಕಿರುಚಾಡುತ್ತಾ ಗೋಗರೆದಿದ್ದಾಳೆ. ಸುಭಾಷ್, ಮಹಿಳೆ ಹಾಗೂ ಮತ್ತೊಬ್ಬ ವ್ಯಕ್ತಿ ಜಗಳ ನಿಲ್ಲಿಸದ ಕಾರಣ, ಕಾನೂನು ಸುವ್ಯವಸ್ಥೆ ಠಾಣೆಗೆ ತೆರಳಿ ದೂರು ನೀಡುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ. ಠಾಣೆಗೆ ತೆರಳಿದ ಎರಡೂ ಕಡೆಯವರು ಪರಸ್ಪರರನ್ನು ದೂಷಿಸಲು ಆರಂಭಿಸಿದರು. ಈ ವೇಳೆ ಮಹಿಳೆಯ ಪತಿ ಠಾಣೆಗೆ ಆಗಮಿಸಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಹೇಳಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement