ಬಿಜಾಪುರ: ಶಿಕ್ಷಕರ ಅರ್ಹತೆ ಪರೀಕ್ಷೆ (ಟಿಇಟಿ)ಯನ್ನು ಸರ್ಕಾರ ಬಿಡುವಂತೆ ಆಗ್ರಹಿಸಿ ಎಐಡಿವೈಒ ವಿದ್ಯಾರ್ಥಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಬೆಳಗ್ಗೆ 10 ಗಂಟೆಗೆ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಟಿಇಟಿ ಪರೀಕ್ಷೆಯನ್ನು ತಕ್ಷಣ ಕೈ ಬಿಡುವಂತೆ ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಅನಂತರ ಬಸವೇಶ್ವರ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ವಿದ್ಯಾರ್ಥಿಗಳು, ಸರ್ಕಾರದ ಆತುರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಐಡಿವೈಓ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ಅವರು ಮಾತನಾಡಿ, ಡಿಇಡಿ, ಬಿಇಡಿ ಅಭ್ಯರ್ಥಿಗಳ ಮೇಲೆ ಹೇರಿರುವ ಟಿಇಟಿ ಪರೀಕ್ಷೆ ಸಾಕಷ್ಟು ಗೊಂದಲಗಳಿಂದ ಕೂಡಿದೆ. ಸರ್ಕಾರವು ಯಾವುದೇ ತಯಾರಿ ಹಾಗೂ ಅಭಿಪ್ರಾಯ ಪಡೆಯದೇ ದಿಢೀರನೆ ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಈಗಾಗಲೇ ಖಾಲಿ ಇರುವ ಸಾವಿರಾರು ಶಿಕ್ಷಕರ ಹುದ್ದೆಗಳಿಗೆ ಸರ್ಕಾರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಅನಿರೀಕ್ಷಿತವಾಗಿ ಬಂದೆರಗಿದ ಟಿಇಟಿ ಪರೀಕ್ಷೆಯು ಅಘಾತವನ್ನುಂಟುಮಾಡಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಈ ಪರೀಕ್ಷೆಯನ್ನು ಕೇವಲ ಅರ್ಹತೆಯನ್ನಾಗಿಸಿರುವುದು ಹಾಗೂ ದುಬಾರಿ ಪರೀಕ್ಷಾ ಶುಲ್ಕವನ್ನು ನಿಗದಿಪಡಿಸಿರುವುದು ಯುವಜನ ವಿರೋಧಿಯಾದ ನೀತಿಯಾಗಿದೆ. ಶಿಕ್ಷಕರ ತರಬೇತಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪಠ್ಯಕ್ರಮವನ್ನು ಅನುಸರಿಸುತ್ತಿದ್ದರೂ ಟಿಇಟಿ ಪರೀಕ್ಷೆಗೆ ರಾಷ್ಟ್ರಮಟ್ಟದ ಪಠ್ಯಕ್ರಮವನ್ನು ಹೇರಿರುವುದು ಅವೈಜ್ಞಾನಿಕವಾಗಿದೆ ಎಂದು ಅವರು ವಿದ್ಯಾರ್ಥಿಗಳು ಆರೋಪಿಸಿದರು.
ಈ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಾಗೂ ಬ್ಯಾಂಕ್ ಚಲನ್ ಮೂಲಕ ಶುಲ್ಕ ಪಾವತಿಸಲು ಕೇವಲ 15 ದಿನ ಕಾಲಾವಕಾಶ ನೀಡಿರುವುದು ಗಾಯದ ಮೇರೆ ಬರೆ ಎಳೆದಂತಾಗಿದೆ.
ರಾಜ್ಯಾದ್ಯಂತ ಲಕ್ಷಾಂತರ ಜನ ಅಭ್ಯರ್ಥಿಗಳು ಸುಡು ಬಿಸಿಲಲ್ಲಿ ಇಂಟರ್‌ನೆಟ್ ಸೆಂಟರ್‌ಗಳ ಮುಂದೆ, ಶುಲ್ಕ ಪಾವತಿಸಲು ಬ್ಯಾಂಕ್ ಮುಂದೆ ಸರತಿ ಸಾಲಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಎಲ್ಲ ತೊಂದರೆಗಳ ಮಧ್ಯ ಕೇವಲ ವರ್ಲ್ಡ್ ಬ್ಯಾಂಕ್ ಆಣತಿಯಂತೆ ಹಣ ದೋಚುವ ಉದ್ದೇಶದಿಂದ ತರಾತುರಿಯಲ್ಲಿ ಈ ಪರೀಕ್ಷೆಯನ್ನು ನಡೆಸುವುದರಿಂದ ಲಕ್ಷಾಂತರ ಶಿಕ್ಷಕ ಉದ್ಯೋಗಾಕಾಂಕ್ಷಿಗಳ ಭವಿಷ್ಯವನ್ನು ಡೋಲಾಯಮಾನವಾಗಿಸುತ್ತದೆ. ಆದ್ದರಿಂದ ಟಿಇಟಿಯನ್ನು ಈ ಕೂಡಲೇ ಕೈ ಬಿಡಬೇಕು. ಈಗಾಗಲೇ ಶುಲ್ಕ ಪಾವತಿಸಿದವರ ಹಣವನ್ನು ಹಿಂದುರುಗಿಸಬೇಕೆಂದು ಆಗ್ರಹಿಸಿದರು.
ಎಐಡಿವೈಒ ಉಪಾಧ್ಯಕ್ಷ ಬಾಳು ಜೇವೂರ, ಉಮೇಶ ಬಿ.ಆರ್., ಸದಸ್ಯರಾದ ಸಚಿನ್ ತಳವಾರ, ಆನಂದ ಕುಂಟೋಜಿ, ಶೋಭಾ, ಬಿ.ಡಿ. ಬನಸೋಡೆ, ಗುರು ಹುಣಶ್ಯಾಳ, ರಾಘು ಸುಣಗಾರ, ರಾಜು ಬರಗೊಂಡ, ಚಂದ್ರು, ಮಹಾಂತೇಶ ಮಮದಾಪೂರ, ರೆಹಮಾನ ತನಹಳ್ಳಿ, ಸುಸ್ಮಿತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Advertisement