ಪುಣೆ/ಬೆಳಗಾವಿ: ಶಿವಾಜಿ ಮತ್ತು ಬಾಳಾ ಠಾಕ್ರೆ ವಿರುದ್ಧ ಫೇಸ್ಬುಕ್ ಮತ್ತು ವ್ಯಾಟ್ಸ್ ಅಪ್ನಲ್ಲಿ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾನೆ ಎಂದು ಶಂಕಿಸಲಾಗಿರುವ ವ್ಯಕ್ತಿಯನ್ನು ಮಹಾರಾಷ್ಟ್ರದಲ್ಲಿ ಹತ್ಯೆ ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದು ಈತನೇ ಎಂದು ಶಂಕಿಸಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯನ್ನು ಸಾದಿಕ್ ಶೇಕ್ ಎಂದು
ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯೊಂದರ 13 ಮಂದಿಯನ್ನು ಬಂಧಿಸಲಾಗಿದೆ.
ಸಹಜ ಸ್ಥಿತಿಯತ್ತ: ಇದೇ ವೇಳೆ ಗಲಭೆಗೆ ಒಳಗಾಗಿದ್ದ ಬೆಳಗಾವಿಯಲ್ಲಿ ಜನಜೀವನ ಸಹಜಸ್ಥಿತಯತ್ತ ಮರಳುತ್ತಿದೆ. ಆದರೆ, ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ. ಮಂಗಳವಾರ ರಾತ್ರಿ ಮಜಗಾಂವ್ನಲ್ಲಿ ಗುಂಪೊಂದು
ಸಾರ್ವಜನಿಕ ಸ್ಥಳದಲ್ಲಿ ಪ್ರವೇಶ ದ್ವಾರದ ಕಟ್ಟಡ ನಿರ್ಮಿಸಲು ಯತ್ನಿಸಿರುವುದಕ್ಕೆ ಮತ್ತೊಂದು ಗುಂಪು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು. ಗಣೇಶ ಮಂದಿರದ ಮೇಲೂ ಕಲ್ಲು ತೂರಲಾಯಿತು. ಇದರ ಬೆನ್ನಲ್ಲೇ ನಗರಾದ್ಯಂತ ಅಲ್ಲಲ್ಲಿ ಕಲ್ಲು ತೂರಾಟ ನಡೆದಿದೆ. ಇದರಿಂದ ನಗರದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 55 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
Advertisement