ಹೊಸಪೇಟೆ: ನಗರದ ನಿವಾಸಿ, ಬಳ್ಳಾರಿಯ ನಳಂದ ಪಿಯು ಕಾಲೇಜಿನ ವಿದ್ಯಾರ್ಥಿ ಕೃಷ್ಣಮೂರ್ತಿ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎಸ್ಎಫ್ಐ ಸಂಘಟನೆ ವಿದ್ಯಾರ್ಥಿಗಳು ವಿಜಯನಗರ ಕಾಲೇಜಿನ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಮಾನವ ಸರಪಳಿ ರಚಿಸಿ, ರಸ್ತೆತಡೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಕೆ. ಸುರೇಶ್ ಚವ್ಹಾಣ್, ಹಣ ಮಾಡುವ ದಂಧೆಗೆ ಖಾಸಗಿ ಸಂಸ್ಥೆಗಳು ಇಳಿದಿದ್ದು, ಶಿಕ್ಷಣ ನೀಡುವ ಹೆಸರಲ್ಲಿ ವಿದ್ಯಾರ್ಥಿಗಳ ಬದುಕಿನೊಂದಿಗೆ ಆಟ ಆಡುತ್ತಿವೆ. ಇದರ ಭಾಗವಾಗಿ ವಿದ್ಯಾರ್ಥಿ ಕೃಷ್ಣಮೂರ್ತಿ ಸಾವು ಸಂಭವಿಸಿದೆ. ಈ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡು ವಾರವಾಗುತ್ತಾ ಬಂದರೂ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡಿಲ್ಲ. ಕೂಡಲೇ ಪ್ರಕರಣ ದಾಖಲಿಸಬೇಕು. ಘಟನೆಗೆ ಸಂಬಂಧಿಸಿದಂತೆ ಎಸ್ಪಿ, ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಶಿಕ್ಷಣ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಎಸ್ಎಫ್ಐ ತಾಲೂಕು ಅಧ್ಯಕ್ಷ ಟಿ. ಶರತ್ಕುಮಾರ್, ತಾಲೂಕು ಕಾರ್ಯದರ್ಶಿ ವೈ. ಪಂಪಾನಂದ, ಭೀಮೇಶ್, ವಿಜಯಲಕ್ಷ್ಮಿ, ವಸಂತ ಕಲಾಲ್ ಸೇರಿದಂತೆ ನೂರಾರು ವಿದ್ಯಾರ್ಥಿಗಳ ಹಾಗೂ ಮೃತಪಟ್ಟ ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು.