ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 5
ನಳಂದ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಖಂಡಿಸಿ ಹಾಗೂ ಶಾಲಾ-ಕಾಲೇಜು ಬಂದ್ಗೆ ಕರೆ ನೀಡಿದ್ದ ಸಂದರ್ಭದಲ್ಲಿ ಬಂಧಿತ ವಿದ್ಯಾರ್ಥಿಗೆ ಕೋಳ ಹಾಕಿದ ಪೊಲೀಸರ ಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳವಾರ ಕರೆ ನೀಡಿದ್ದ ಬಳ್ಳಾರಿ ಬಂದ್ ಶಾಂತಿಯುತವಾಗಿ ನಡೆದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರಿ ವಾಹನಗಳ ಸಂಚಾರ ಸ್ಥಗಿತವಾಗಿ, ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಣೆಯಿಂದ ಬಂದ್ ಆಗಿದ್ದವು.
ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಿನ ಜಾವ ಪರವಾನಗಿ ಪಡೆದಿಲ್ಲ ಎಂದು ಪ್ರಚಾರದ ವಾಹನ ಹಾಗೂ ವಾಹನ ಚಾಲಕನನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ಎಬಿವಿಪಿ ಕಾರ್ಯಕರ್ತರು ಕೌಲ್ಬಜಾರ್ ಪೊಲೀಸ್ ಠಾಣೆಗೆ ಹೋಗಿ ವಾಹನ ಬಿಡಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಪ್ರತಿಭಟನಾನಿರತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿ ರುದ್ರಮುನಿ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಡಿಸಿಗೆ ಮನವಿ: ಪ್ರತಿಭಟನೆ ಹಿನ್ನೆಲೆಯಲ್ಲಿ ಎಬಿವಿಪಿ, ಬಿಜೆಪಿ ಮುಖಂಡರು, ವಿವಿಧ ಸಂಘಟನೆಗಳ ಕಾರ್ಯಕರ್ತರು ನೂರಾರು ಬೈಕ್ನಲ್ಲಿ ಬೈಕ್ರ್ಯಾಲಿ ನಡೆಸಿ, ವಿದ್ಯಾರ್ಥಿಗಳಿಗೆ ಕೋಳ ಹಾಕಿದ ಪೊಲೀಸರ ಕ್ರಮ ಖಂಡಿಸಿದರು. ಕೋಳ ಹಾಕಿದ ಪೊಲೀಸರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು. ನಂತರ ನಗರದ ದುರ್ಗಮ್ಮ ದೇವಸ್ಥಾನದಿಂದ ಗಡಿಗಿ ಚೆನ್ನಪ್ಪ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲಿಸಿದರು. ಬಂದ್ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಟೈರ್ ಸುಟ್ಟು, ಆಕ್ರೋಶ ವ್ಯಕ್ತಪಡಿಸಿದರು.
ಬಂದ್ಗೆ ಉತ್ತಮ ಪ್ರತಿಕ್ರಿಯೆ: ಎಬಿವಿಪಿ ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ನಗರದ ಬಡಾವಣೆ, ಚಿಕ್ಕಪುಟ್ಟ ರಸ್ತೆಗಳಲ್ಲಿ ಅಲ್ಲಲ್ಲಿ ಅಂಗಡಿ ಮುಂಗಟ್ಟು ತೆರೆದಿದ್ದವು. ಬೆಳಗಿನಿಂದಲೇ ಭಾರಿ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ದ್ವಿಚಕ್ರ ವಾಹನ, ಕಾರು ಸೇರಿದಂತೆ ಇತರ ವಾಹನಗಳ ಸಂಚಾರ ಎಂದಿನಂತೆ ಸಾಗಿತ್ತು. ನಗರದ ಎಲ್ಲ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿದ್ದವು. ಪೆಟ್ರೋಲ್ ಬಂಕ್, ವಿಮೆ, ಕೆಲ ಬ್ಯಾಂಕ್ಗಳು ಮುಚ್ಚಿದ್ದವು. ಹೊಸ ಮತ್ತು ಹಳೆ ಬಸ್ ನಿಲ್ದಾಣಗಳು ಬಸ್ಗಳು ಇಲ್ಲದೆ ಬಿಕೋ ಎನ್ನುತ್ತಿದ್ದವು. ಇನ್ನು ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಕಂಬನಿ ಮಿಡಿದ ಪೋಷಕರು: ನಳಂದ ವಸತಿ ನಿಲಯದಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಕೃಷ್ಣಮೂರ್ತಿ ತಂದೆ ಗಂಗಾಧರ ಮತ್ತು ತಾಯಿ ಜಯಮ್ಮ ಹಾಗೂ ನಂದಿ ಶಾಲೆಯಲ್ಲಿ ಮೃತಪಟ್ಟಿರುವ ವಿದ್ಯಾರ್ಥಿ ರವಿತೇಜನ ತಂದೆ ಈರಣ್ಣ, ತಾಯಿ ಪದ್ಮಾವತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮೃತ ಮಕ್ಕಳ ತಂದೆ-ತಾಯಿಗಳು ಕಣ್ಣೀರು ಸುರಿಸಿದ್ದು ಮನಕಲಕುವಂತಿತ್ತು. ನಮ್ಮ ಕುಟುಂಬಕ್ಕೆ ಆದ ಅನ್ಯಾಯ ಬೇರೊಂದು ಕುಟುಂಬಕ್ಕೆ ಆಗಬಾರದು, ನಮ್ಮ ಮಕ್ಕಳಿಗೆ ಆದ ಗತಿ ಬೇರೆಯವರ ಮಕ್ಕಳಿಗೆ ಆಗಬಾರದು ಎನ್ನುವ ಕಾರಣಕ್ಕೆ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಇತರ ಫೋಷಕರಿಗೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಆಯೋಗಕ್ಕೆ ದೂರು-ಕರವೇ: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದವರು ಬಂದ್ಗೆ ಬೆಂಬಲ ನೀಡಿ, ವಿದ್ಯಾರ್ಥಿಗಳನ್ನು ಥಳಿಸುವುದು ಹಾಗೂ ಕೋಳ ಹಾಕಿಕೊಂಡು ನ್ಯಾಯಾಲಯಕ್ಕೆ ಕರೆತಂದಿರುವುದು ಮಾನವ ಹಕ್ಕುಗಳ ಉಲ್ಲಂಘಟನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪತ್ರದ ಮೂಲಕ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುರೇಶ್ ಸೇರಿದಂತೆ ಇತರರು 100ಕ್ಕೂ ಹೆಚ್ಚು ಅಂಚೆ ಪತ್ರಗಳನ್ನು ಏಕಾಕಾಲದಲ್ಲಿ ರವಾನಿಸಲಾಯಿತು.
ಎಬಿವಿಪಿ ಬೆನ್ನಿಗೆ ವಿವಿಧ ಸಂಘಟನೆಗಳು: ಎಬಿವಿಪಿ ಕರೆ ನೀಡಿದ್ದ ಬಳ್ಳಾರಿ ಬಂದ್ಗೆ ಬಿಜೆಪಿ, ವಿಶ್ವಹಿಂದು ಪರಿಷತ್, ಭಜರಂಗದಳ, ಆರ್ಎಸ್ಎಸ್, ರಂಗತೋರಣ, ಕರ್ನಾಟಕ ರಕ್ಷಣಾ ವೇದಿಕೆ, ನವಕರ್ನಾಟಕ ಯುವಶಕ್ತಿ ಸಂಘ, ಭಾರತ್ ಸ್ವಾಭಿಮಾನ್ ಟ್ರಸ್ಟ್, ಪತಂಜಲಿ ಯೋಗ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡಿದ್ದರು.
ಪ್ರತಿಭಟನೆಯಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ, ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಬಿಜೆಪಿಯ ಗೋನಾಳ್ ಮುರಾಹರಿಗೌಡ, ಸಂಜಯ್, ಎಚ್. ಹನುಮಂತಪ್ಪ, ಸತೀಶ್ ಚಕ್ರವರ್ತಿ, ರೂಪನಗುಡಿ ಬಸವರಾಜ್, ಶಿವಾರೆಡ್ಡಿ, ಮಲ್ಲೇಶ್, ಕೆ. ಸುರೇಶ್, ಹುಲುಗಪ್ಪ, ಕೆ.ಎಂ. ಜಯಗೋಪಾಲ್, ಅನಿಲ್ನಾಯ್ಡು, ಬಸವರಾಜ್, ಪ್ರಭುದೇವ್ ಕಪ್ಪಗಲ್, ಶ್ರೀರಾಮ್, ಅಶೋಕ್, ಸಿದ್ಮಲ್ ಮಂಜುನಾಥ್, ಕಪ್ಪಗಲ್ ಆಚಾರಿ, ವೀರಾರೆಡ್ಡಿ, ಎಬಿವಿಪಿಯ ಪ್ರಶಾಂತ ಪವಾರ್, ಅಡವಿಸ್ವಾಮಿ, ಮಹಾಂತೇಶ್ ನಾಯಕ್, ಮಲ್ಲೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.