ಆಮಿಷಕ್ಕೆ ಬಲಿಯಾಗದೆ ಮತ ನೀಡಿ: ಬಿಎಸ್‌ವೈ

Updated on: 

ಕಲಘಟಗಿ:  ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಜಾಗೃತರಾಗಿ ಹಣ ಹೆಂಡದ ಆಮಿಷಕ್ಕೆ ಬಲಿಯಾಗದೆ ಮತದಾನದ ಮೌಲ್ಯ ಅರಿತು ರಾಜ್ಯದಲ್ಲಿ ಕೆಜೆಪಿ ಪಕ್ಷವನ್ನು ಬೆಂಬಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬುಧವಾರ ಸಂಜೆ ಪಟ್ಟಣದ ಹನ್ನೆರಡುಮಠದ ಬಳಿಯಲ್ಲಿ ಕಲಘಟಗಿ ಮತಕ್ಷೇತ್ರದ ಕೆಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ನಾಲ್ಕು ದಶಕಗಳಿಂದಲೂ ಭಾರತೀಯ ಜನತಾ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇವೆ. ಜನ ಸಾಮಾನ್ಯರ ಅಭಿವೃದ್ಧಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಹೋರಾಟ ಮಾಡಿಕೊಂಡು ಬರುತ್ತಿದ್ದರೆ ಇದನ್ನು ಸಹಿಸದ ರಾಜ್ಯ, ರಾಷ್ಟ್ರೀಯ ಮುಖಂಡರು ನನ್ನನ್ನು ತುಳಿಯಲು ಹರಸಾಹಸ ಮಾಡಲು ಮುಂದಾದರು. ಅದಕ್ಕಾಗಿಯೇ ಮೊದಲು ಕರ್ನಾಟಕವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುವ ಕನಸನ್ನು ನನಸಾಗಿಸಲು ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿರುವದಾಗಿ ಹೇಳಿದರು.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿ ಜನಪರ ಅಭಿವೃದ್ಧಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಿ ಜನರು ಸಮೃದ್ಧವಾಗಿ ಬದುಕಬೇಕೆಂಬ ಕನಸು ನನ್ನದಾಗಿತ್ತು. ಈಗ ಕೆಜೆಪಿ ಸ್ಥಾಪನೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಹಿಂಬಾಗಿಲಿನ ರಾಜಕಾರಣವನ್ನು ಮತದಾರರು ಗಮನಿಸಿದ್ದಾರೆಂದರು.
ನಾನು ಯಡಿಯೂರಪ್ಪ ನನ್ನ ಪಕ್ಷದ ಚಿಹ್ನೆಗೆ ಈ ಹೆಸರೇ ಸಾಕು. ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಜನಪರ ಅಭಿವೃದ್ಧಿ ಯೋಜನೆಗಳಿಂದ ಜನ ನನ್ನನ್ನು ಗುರುತಿಸುತ್ತಾರೆಂದು ಮಾರ್ಮಿಕವಾಗಿ ಹೇಳಿದ ಯಡಿಯೂರಪ್ಪ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ರಾಜ್ಯ ಮುಖಂಡರನ್ನು ಟೀಕಿಸಿದರು.
ನನಗೆ ರಾಜಕೀಯದಲ್ಲಿ ಇತರರ ಮೇಲೆ ಆಕ್ರಮಣ ಮಾಡುವುದು ಗೊತ್ತು, ಆತ್ಮರಕ್ಷಣೆ ಮಾಡಿಕೊ ಳ್ಳುವುದೂ ಗೊತ್ತು ಎಂದರು.
ಅಲ್ಲದೇ, ಸ್ಥಳೀಯ ಕಾಂಗ್ರೆಸ್ ಶಾಸಕರ ಹೆಸರನ್ನು ಹೇಳದೆ ಅವರ ದುಡ್ಡಿನ ರಾಜಕಾರಣಕ್ಕೆ ಮೊರೆ ಹೋಗದೆ ಮತದಾರರು ಜನಪರ ಅಭಿವೃದ್ಧಿ ಚಿಂತನೆಯ ಕೆಜೆಪಿ ಅಭ್ಯರ್ಥಿ ಸಿ.ಎಂ. ನಿಂಬಣ್ಣವರ ಅವರನ್ನು ಬೆಂಬಲಿಸಬೇಕೆಂದು ಹೇಳಿದರು.
ಮತದಾರರು ಜಾಗೃತರಾಗಿದ್ದಾರೆ: ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿ ಮತದಾರರು ಜಾಗೃತರಾಗಿದ್ದಾರೆ. ರಾಜಕಾರಣಿಗಳ ಮಾತು ಕೃತಿಗಳನ್ನು ಅರಿತಿದ್ದಾರೆ. ಅಲ್ಲದೆ, ಪತ್ರಿಕಾ ಮಾಧ್ಯಮದವರ ತಿರುವು ಮುರುವು ಸಮೀಕ್ಷೆಗಳನ್ನು ಅರಿತು ತಮ್ಮ ಮತಗಳನ್ನು ಚಲಾಯಿಸುತ್ತಿದ್ದಾರೆಂಬ ನಂಬಿಕೆಯು ಸುಳ್ಳಾಗಿದೆ ಎಂದು ವಿವರಿಸಿದ ಅವರು,  ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಮಲ, ಕಾಂಗ್ರೆಸ್ ಆಡಳಿತವನ್ನು ಕಿತ್ತೊಗೆದು ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷ ಕೆಜೆಪಿಯನ್ನು ಬೆಂಬಲಿಸಲು ಮನವಿ ಮಾಡಿದರು.
ಮಾಜಿ ಸಚಿವ ಜಬ್ಬಾರಖಾನ ಹೊನ್ನಳ್ಳಿ, ಎಸ್. ಐ. ಚಿಕ್ಕನಗೌಡ್ರ, ಅಶೋಕ ಕಾಟವೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಭಿವೃದ್ಧಿ ಅಧಿಕಾರವನ್ನು ಸಹಿಸದ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಿಎಂ ಸದಾನಂದ ಗೌಡ, ಸಂಸದ ಪ್ರಲ್ಹಾದ ಜೋಶಿ, ಅನಂತಕುಮಾರ, ಕೆ.ಎಸ್. ಈಶ್ವರಪ್ಪ ಮುಂತಾದವರು ಯಡಿಯೂರಪ್ಪನವರ ಬೆನ್ನಿಗೆ ಚೂರಿ ಹಾಕಿದರು. ಇದರಿಂದಾಗಿಯೇ ಯಡಿಯೂರಪ್ಪನವರು ಕೆಜೆಪಿ ಹುಟ್ಟು ಹಾಕಿದರು. ಹೀಗಾಗಿ ಎಲ್ಲರೂ ಕೆಜೆಪಿಯನ್ನು ಬೆಂಬಲಿಸಬೇಕು ಎಂದರು.
ಧಾರವಾಡ ಜಿಲ್ಲಾ ಕೆಜೆಪಿ ಸಂಚಾಲಕ ಸಿ.ಎಂ. ನಿಂಬಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಡಾ. ಆರ್.ಬಿ. ಶಿರಿಯಣ್ಣವರ, ಫಾದರ್ ಜೇಕಬ್, ಎಂ.ಬಿ. ಲಕ್ಷ್ಮಣ ನಾರಾಯಣ, ಯು.ಬಿ. ಬಣಕಾರ, ರಾಜೇಂದ್ರ ಗೋಖಲೆ, ಎಸ್. ಮಾಮನಿ, ಶಂಕರಲಿಂಗ ಬಸವರೆಡ್ಡಿ, ನಾಗನಗೌಡ ನೀರಲಗಿ, ಸಿ.ಆರ್. ಪಾಟೀಲ, ಸದು ಚಿಂತಾಮಣಿ, ಗೀತಾ ಮರಲಿಂಗಣ್ಣವರ, ಡಿ.ಡಿ. ಮುತ್ತಗಿ, ಎಂ. ಕಾಗಲಕರ, ರತ್ನಾಜಿ ಕಡ್ಲಾಸ್ಕರ, ಸುನೀಲ ಸರೂರ, ಅಜ್ಜಪ್ಪ ಬೆಂಡಿಗೇರ, ಅಶೋಕ ನಿಡೋಣಿ, ವಿ.ಬಿ. ಶಿವನಗೌಡ್ರ, ಎಸ್.ಟಿ. ತೆಗ್ಗಿಹಳ್ಳಿ, ಶಿವಲಿಂಗ ಯಲಿವಾಳ, ವೆಂಕಟೇಶ ಮೇಸ್ತ್ರಿ, ಬಂಗಾರೇಶ ಹಿರೇಮಠ, ತಾಪಂ ಅಧ್ಯಕ್ಷ ಬಸವಣ್ಣಯ್ಯ ಹಿರೇಮಠ, ಮಾಜಿ ಅಧ್ಯಕ್ಷ ಶೇಖಪ್ಪ ಹುಲಗೂರ, ಎಂ.ಎಫ್. ಜಾವೂರ, ಯಲ್ಲಾರಿ ಶಿಂಧೆ, ನಿಂಗಪ್ಪ ಸುತಗಟ್ಟಿ, ಐ.ಡಿ. ಬಡಿಗೇರ, ಪರಶುರಾಮ ರಜಪೂತ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com