-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 6
ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು, ಮಹಿಳೆಯರನ್ನು ಸಾರ್ವಜನಿಕ ಸ್ಥಳ, ಮನೆಗಳಲ್ಲಿ ಚುಡಾಯಿಸಿ, ಕಿರುಕುಳ ನೀಡಿದರೆ 'ದುರ್ಗಾ' ಪ್ರತ್ಯಕ್ಷಳಾಗಿ ಮಹಿಳೆಯರ ರಕ್ಷಣೆ ಮಾಡುತ್ತಾಳೆ!
ಇದು ಮಾಲಾಶ್ರೀ ಸಿನಿಮಾ ಎಂದು ಭಾವಿಸಬೇಡಿ. ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ 'ದುರ್ಗಾ' ಹೆಸರಿನ ತುರ್ತು ಸ್ಪಂದನ ತಂಡ ರಚೆನೆಯಾಗಿದ್ದು, ಬುಧವಾರದಿಂದ ಕಾರ್ಯ ಆರಂಭಿಸಿದೆ.
ಬಳ್ಳಾರಿ ಮಹಿಳೆಯರು ತಮಗೆ ಕಷ್ಟ ಬಂದಾಗ ಕನಕ ದುರ್ಗಮ್ಮನನ್ನು ನೆನೆಯುತ್ತಾರೆ. ಮೊಬೈಲ್ 7829181181 ಸಂಖ್ಯೆಗೆ ಕರೆ ಅಥವಾ ಸಂದೇಶ ಕಳುಹಿಸಿದರೆ ಮಹಿಳಾ ಪೊಲೀಸರ 'ದುರ್ಗಾ' ತಂಡ ಪ್ರತ್ಯಕ್ಷವಾಗಿ ಚುಡಾಯಿಸಿದವರಿಗೆ, ದೌರ್ಜನ್ಯ ಮಾಡಿದವರಿಗೆ ಬುದ್ಧಿ ಕಲಿಸುತ್ತದೆ.
ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಬಳ್ಳಾರಿ ಜಿಲ್ಲಾ ಪೊಲೀಸ್ ವಿಶೇಷವಾಗಿ ದುರ್ಗಾ ಎಂಬ ಪ್ರತ್ಯೇಕ ಮಹಿಳಾ ತುರ್ತು ಸ್ಪಂದನ ಘಟಕ ರಚನೆ ಮಾಡಿದೆ. ಇದಕ್ಕೆ ಪ್ರತ್ಯೇಕ ವಾಹನ ವ್ಯವಸ್ಥೆ ಇದೆ. 'ಕನ್ನಡಪ್ರಭ' ಈ ವಿಶೇಷ ಘಟಕದ ಕುರಿತಾಗಿ ಜ. 14ರಂದು ವರದಿ ಪ್ರಕಟಿಸಿ ಸಾರ್ವಜನಿಕರ ಗಮನ ಸೆಳೆದಿತ್ತು.
ಪೂರ್ವ ವಲಯದ ಐಜಿಪಿ ಸಂಜಯ್ ಸಹಾಯ್ ಈ ಘಟಕಕ್ಕೆ ಬುಧವಾರ ಚಾಲನೆ ನೀಡಿದ್ದಾರೆ.
24 ಗಂಟೆ ಕೆಲಸ: ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸೆಲ್ ಇದ್ದರೂ, 'ದುರ್ಗಾ' ತಂಡ ಪ್ರತ್ಯೇಕವಾಗಿ ಕೆಲಸ ಮಾಡುತ್ತದೆ. ಪತ್ಯೇಕ ವಾಹನ, ಸಿಬ್ಬಂದಿ ನೇಮಕ ಮಾಡಲಾಗಿದೆ. ಓರ್ವ ಪಿಎಸ್ಐ, ಇಬ್ಬರು ಮಹಿಳಾ ಪೇದೆ, ಇಬ್ಬರು ಪುರುಷ ಪೇದೆಗಳು ತಂಡದಲ್ಲಿದ್ದಾರೆ.
ದಿನದ 24 ಗಂಟೆಯೂ ಈ ತಂಡ ಕಾರ್ಯ ನಿರ್ವಹಿಸುತ್ತದೆ. ಕಂಟ್ರೋಲ್ ರೂಮಿನಲ್ಲಿ ಈ ಘಟಕಕ್ಕಾಗಿ ಓರ್ವ ಸಿಬ್ಬಂದಿ ನೇಮಕ ಮಾಡಲಾಗಿದೆ. ಮೊ. 7829181181 ನಂಬರ್ಗೆ ಕರೆ ಮಾಡಿದಾಕ್ಷಣ, ಕಂಟ್ರೊಲ್ ರೂಂ ಸಿಬ್ಬಂದಿ ದುರ್ಗಾ ತಂಡಕ್ಕೆ ಮಾಹಿತಿ ನೀಡುತ್ತಾರೆ. ಕೂಡಲೇ ತಂಡ ಅಲ್ಲಿ ಪ್ರತ್ಯಕ್ಷ.
ಬಳ್ಳಾರಿ ನಗರ ವ್ಯಾಪ್ತಿಯಿಂದ ಆರಂಭ: ಆರಂಭದಲ್ಲಿ ಬಳ್ಳಾರಿ ನಗರಕ್ಕೆ ಸೀಮಿತವಾಗಿ 'ದುರ್ಗಾ' ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕ ಸ್ಥಳ, ಮನೆಯಲ್ಲಿ ಮಹಿಳೆಗೆ ಕಿರುಕುಳ ನೀಡಿದರೆ, ಚುಡಾಯಿಸಿದರೆ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವ ಅಗತ್ಯವಿಲ್ಲ. ಮೊಬೈಲ್ನಿಂದ 7829181181 ಸಂಖ್ಯೆಗೆ ಕರೆ ಮಾಡಿ, ತಾವು ಎಲ್ಲಿದ್ದೀರಿ, ಆಗಿರುವ ಸಮಸ್ಯೆ ಏನು ಎಂದು ತಿಳಿಸಿದರೆ ಸಾಕು, ದುರ್ಗಾ ತಂಡ ಸ್ಥಳಕ್ಕೆ ಧಾವಿಸುತ್ತದೆ.
ಸ್ಥಳದಲ್ಲಿಯೇ ಬಗೆಹರಿಸುವ ಸಮಸ್ಯೆ ಇದ್ದರೆ, ತಪ್ಪು ಮಾಡಿದವರಿಗೆ ಎಚ್ಚರಿಕೆ ನೀಡಿ ಹೋಗುತ್ತದೆ, ದೂರು ನೀಡಬೇಕಾದರೆ ಆ ಪ್ರಕ್ರಿಯೆ ಮಾಡಲಾಗುತ್ತದೆ. ದೂರು ನೀಡಿದವರ ಸಹಿ ಪಡೆದು ದುರ್ಗಾ ತಂಡ ಪ್ರಕರಣವನ್ನು ಫಾಲೋ ಆಪ್ ಮಾಡುತ್ತದೆ.
19 ಸಿಬ್ಬಂದಿ ನಿಯೋಜನೆ
ಮಹಿಳೆಯರ ನೋವಿಗೆ ತುರ್ತು ಸ್ಪಂದನೆ ಉದ್ದೇಶದಿಂದ ಪ್ರತ್ಯೇಕ ಮಹಿಳಾ ತುರ್ತು ಸ್ಪಂದನ ಘಟಕ ಆರಂಭಿಸಿ, 'ದುರ್ಗಾ' ಎಂದು ಹೆಸರಿಡಲಾಗಿದೆ. 19 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಳ್ಳಾರಿ ನಗರದ ವ್ಯಾಪ್ತಿಯಲ್ಲಿ ಮಾತ್ರ ಆರಂಭಿಸಿದ್ದು, ಭವಿಷ್ಯದಲ್ಲಿ ವಿಸ್ತರಿಸಲಾಗುತ್ತದೆ. ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು, ಕಿರುಕುಳ, ದೌರ್ಜನ್ಯ ಆದರೆ ಕೂಡಲೇ ಕರೆ ಅಥವಾ ಸಂದೇಶ ಕಳುಹಿಸಿದರೂ, ದುರ್ಗಾ ತಂಡ ಸ್ಥಳಕ್ಕೆ ಧಾವಿಸುತ್ತದೆ.
ಣ ಡಾ ಚಂದ್ರಗುಪ್ತ, ಬಳ್ಳಾರಿ ಎಸ್ಪಿ