ಇಂದಿನಿಂದ ಆಮರಣಾಂತ ಉಪವಾಸ

Updated on: 

ಬಳ್ಳಾರಿ: ತುಂಗಭದ್ರಾ ಕೆಳಮಟ್ಟದ ಬಲದಂಡೆ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಫೆ. 8ರಿಂದ ಆರಂಭಿಸಲಾಗುತ್ತದೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಂಡ್ರಿಗಿ ನಾಗರಾಜ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಭಾಗದ ರೈತರ  ಜೀವನಾಡಿಯಾದ ತುಂಗಭದ್ರಾ ಕೆಳಮಟ್ಟದ ಬಲದಂಡೆ ಕಾಲುವೆಗೆ ಮಾರ್ಚ್ 31ರವರೆಗೆ ನೀರನ್ನು ಹರಿಬಿಡಲಾಗುತ್ತದೆ ಎಂದು ಬೋರ್ಡ್‌ನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಜನವರಿ 27ರಿಂದ ಆಂಧ್ರದ ಪಾಲಿನ ನೀರು ಬಿಡುವುದನ್ನು ನಿಲ್ಲಿಸಲಾಗಿದೆ. ಏಕಾಎಕಿ ಆಂಧ್ರದ ಪಾಲಿನ ನೀರನ್ನು ನಿಲ್ಲಿಸಿ ಜಾಣ ಕುರುಡುತನ ಪ್ರದರ್ಶನ ಮಾಡುವ ಮೂಲಕ ರೈತರು ಸಮಸ್ಯೆ ಎದುರಿಸುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಎಲ್‌ಎಲ್‌ಸಿಗೆ 550 ಕ್ಯುಸೆಕ್ ನೀರನ್ನು ಬಿಡುತ್ತಿದ್ದಾರೆ. ಆದರೆ ರಾಜ್ಯದ ರೈತರು ಇದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಡಿಜೈನ್ ಡಿಪಿಗಳಿಗೆ ನೀರು ಏರುವುದಿಲ್ಲ. ಇದೀಗ ಕಾಲುವೆಗೆ ನೀರು ಬಿಡದಿರುವುದು ಕೇವಲ ರೈತರಿಗೆ ಮಾತ್ರವಲ್ಲದೆ, ಕುಡಿಯುವ ನೀರಿನ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ, ಕುಡಿಯುವ ನೀರಿಗೆ ಕಳೆದ ವರ್ಷಕ್ಕಿಂತಲೂ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತವಂತಾಗುತ್ತದೆ ಎಂದು ಹೇಳಿದ್ದಾರೆ. ನೀರು ಬಿಡಿಸುವ ವಿಚಾರದಲ್ಲಿ ಬಿಜೆಪಿ, ಬಿಎಸ್ಸಾರ್, ಕಾಂಗ್ರೆಸ್‌ನವರು ಡೋಂಗಿ ಹೋರಾಟ ಮಾಡುತ್ತಿದ್ದಾರೆ. ಈ ವರೆಗೂ ಇನ್ನು ಕಾಲುವೆಗೆ ನೀರು ಬಿಟ್ಟಿಲ್ಲ. ಆದರೂ ಕೂಡ ನೀರು ಬಿಡಿಸಲಾಗಿದೆ ಎಂದು ರೈತರಿಗೆ ಸುಳ್ಳು ಮಾಹಿತಿ ನೀಡಿ, ದಾರಿ ತಪ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್‌ಎಲ್ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಜೆಡಿಎಸ್ ರೈತ ವಿಭಾಗದ ಜಿಲ್ಲಾಧ್ಯಕ್ಷ ನೆಕ್ಕಂಟಿ ಶ್ರೀನಿವಾಸ್ ಹಾಗೂ ರಾಜ್ಯ ಪರಿಷತ್ ಸದಸ್ಯ ಪಿ.ಎಸ್. ಸೋಮಲಿಂಗನಗೌಡ ನೇತೃತ್ವದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com