ರು. 113 ಕೋಟಿ ಬಜೆಟ್

Updated on: 

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 7
ರಾಜ್ಯದ ಎಸ್‌ಎಫ್‌ಸಿ ಅನುದಾನದಿಂದ ರು. 15 ಕೋಟಿ, ಮನೆ ಕಂದಾಯದಿಂದ ರು. 20 ಕೋಟಿ, ನೀರಿನ ಶುಲ್ಕ ರು. 8.25 ಕೋಟಿ, ಸರ್ಕಾರದ ವಿವಿಧ ಯೋಜನೆಗಳಿಂದ ಆದಾಯವನ್ನು ನಿರೀಕ್ಷಿಸುವ ಮೂಲಕ 2013-14ನೇ ಸಾಲಿನಲ್ಲಿ ರು. 113 ಕೋಟಿ ಗಾತ್ರದ ಬಜೆಟ್ ಆಗಿದ್ದು, ರು. 2.39 ಕೋಟಿ ಉಳಿತಾಯ ಬಜೆಟ್‌ನ್ನು ಮಹಾನಗರ ಪಾಲಿಕೆ ಮಹಾಪೌರ ಇಬ್ರಾಹಿಂಬಾಬು ಗುರುವಾರ ಪಾಲಿಕೆಯಲ್ಲಿ ಮಂಡಿಸಿದರು.
2012-13ನೇ ಸಾಲಿನಲ್ಲಿ ರು. 10,263.65 ಲಕ್ಷ ಬಜೆಟ್ ಮಂಡನೆ ಮಾಡಿದ್ದು, ಅದರಲ್ಲಿ ರು. 8,984.38 ಲಕ್ಷ ಖರ್ಚಾಗಿತ್ತು. ಉಳಿತಾಯ ಶುಲ್ಕ ರು. 1,279.26 ಲಕ್ಷಗಳಾಗಿತ್ತು. 2013-14ನೇ ಸಾಲಿನಲ್ಲಿ ಆರಂಭಿಕ ಶುಲ್ಕ ರು. 1,279.27, ಆದಾಯ ರು. 10,078.09 ಲಕ್ಷ. ಒಟ್ಟು ರು. 11,357.36 ಲಕ್ಷಗಳಿದ್ದು, ಅದರಲ್ಲಿ ರು. 11,117.57 ಲಕ್ಷ ಖರ್ಚು ಅಂದಾಜಿಸಲಾಗಿದ್ದು, ರು. 239.79 ಲಕ್ಷ ಉಳಿತಾಯ ಬಜೆಟ್ ಮಂಡನೆ ಮಾಡಿದ್ದಾರೆ.
ಈ ಬಾರಿ ಬಜೆಟ್‌ನಲ್ಲಿ ನಗರದ ಹಸಿರು, ಸ್ವಚ್ಛತೆ, ರಸ್ತೆ ಸುಂದರೀಕರಣ, ಸಂಜೆ ಆಸ್ಪತ್ರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ ಬಡಜನರ ಕಲ್ಯಾಣಕ್ಕೆ, ಕೆರೆಗಳು ಪುನರುಜ್ಜೀವನಕ್ಕೆ ಆದ್ಯತೆ ನೀಡಲಾಗಿದೆ. ಪರಿಸರ ಸಮತೋಲನ ಕಾಯ್ದುಕೊಳ್ಳಲು ಹಸಿರು ಬಳ್ಳಾರಿ- ಸ್ವಚ್ಛ ಬಳ್ಳಾರಿಗೆ ಈ ಬಾರಿ ಪಾಲಿಕೆ ಬಜೆಟ್‌ನಲ್ಲಿ ಆದ್ಯತೆ ನೀಡಿ, ಸಸಿಗಳಿಗೆ ಟ್ರೀಗಾರ್ಡ್ಸ್ ಅಳವಡಿಸುವುದು, ಮನೆಗೊಂದ ಮರ ಕಾರ್ಯಕ್ರಮಕ್ಕೆ ರು. 75 ಲಕ್ಷ, ನಗರದ ರಸ್ತೆಗಳ ಸುಂದರೀಕರಣಕ್ಕಾಗಿ ರು. 50 ಲಕ್ಷ, ಉದ್ಯಾನವನಗಳ ನಿರ್ವಹಣೆಗಾಗಿ ರು. 25 ಲಕ್ಷ, ಹೈಮಾಸ್ಟ್ ಲೈಟ್, ಬೀದಿದೀಪ ಅಳವಡಿಸಲು ರು. 3.5 ಕೋಟಿ ಮೀಸಲಿಡಲಾಗಿದೆ.
ನೈರ್ಮಲ್ಯಕ್ಕೆ ರು. 8 ಕೋಟಿ: ನಗರ ಸೌದರ್ಯಕ್ಕೆ ಹಾಗೂ ಸ್ವಚ್ಛತೆ ಕಾಪಾಡಲು ರು. 8 ಕೋಟಿ ಮೀಸಲಿರಿಸಲಾಗಿದೆ. ಸಾರ್ವಜನಿಕರಲ್ಲಿ ಆರೋಗ್ಯ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ರು. 20 ಲಕ್ಷ, 29 ಸಾರ್ವಜನಿಕ ಶೌಚಾಲಯಗಳನ್ನು ನವೀಕರಣಗೊಳಿಸಿ ವಿದ್ಯುತ್ ಶಕ್ತಿ ಹಾಗೂ ನೀರಿನ ಸೌಲಭ್ಯ ಕಲ್ಪಿಸಲು ರು. 25 ಲಕ್ಷ ಖರ್ಚು ಮಾಡಲು ಉದ್ದೇಶಿಸಲಾಗಿದೆ. ಬಡಜನರಿಗೆ ಅನುಕೂಲವಾಗುವ ಉದ್ದೇಶದಿಂದಾಗಿ ಉಚಿತವಾಗಿ ಸಂಜೆ ಆಸ್ಪತ್ರೆಯನ್ನು ತೆರೆದು ನುರಿತ ವೈದ್ಯರ ಸೇವೆಯನ್ನು ಪಡೆದು ಚಿಕಿತ್ಸೆ ನೀಡಲು ಹಾಗೂ ವಿವಿಧ ವಾರ್ಡ್‌ಗಳಲ್ಲಿ ಆರೋಗ್ಯ ಶಿಬಿರಗಳನ್ನು ಕೈಗೊಳ್ಳಲು ರು. 25 ಲಕ್ಷ ಮೀಸಲಿರಿಸಲಾಗಿದೆ.
ನೀರು ಸರಬರಾಜು, ಒಳಚರಂಡಿಗೆ ರು. 7.5 ಕೋಟಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಪೈಪ್‌ಲೈನ್ ಕಾಮಗಾರಿಗಾಗಿ ರು. 7.51 ಕೋಟಿ ಮೀಸಲಿಡಲಾಗಿದೆ.
2013-14ನೇ ಸಾಲನಲ್ಲಿ ವಿವಿಧ ರಸ್ತೆ, ಚರಂಡಿ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಎಸ್‌ಎಫ್‌ಸಿ (ಮುಕ್ತನಿಧಿ) ಹಾಗೂ 13ನೇ ಹಣಕಾಸು ಯೋಜನೆಯಡಿ ರು. 21 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಕ್ರೀಡೆ ಮತ್ತು ಸಾಂಸ್ಕೃತಿ ಕಾರ್ಯಕ್ರಮ ಪ್ರೋತ್ಸಾಹದ ಉದ್ದೇಶಕ್ಕೆ ರು. 14 ಲಕ್ಷ. ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ತರಬೇತಿ ನೀಡಲು, ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಬಹುಮಾನ ನೀಡಲು ರು. 50 ಲಕ್ಷ ಕಾಯ್ದಿರಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡಜನರ ಕಲ್ಯಾಣಕ್ಕಾಗಿ ರು. 83 ಲಕ್ಷ ಹಾಗೂ ಎಸ್‌ಎಫ್‌ಸಿ ಮುಕ್ತನಿಧಿಯಲ್ಲಿ ರು. 450 ಲಕ್ಷ, ಶವಗಳ ಅಂತ್ಯಕ್ರಿಯೆ ಮಾಡಲು ವಿದ್ಯುತ್ ಚಿತಾಗಾರ ನಿರ್ಮಿಸಲು ರು. 25 ಲಕ್ಷ ಮೀಸಲಿಡಲಾಗಿದೆ. 2013-14ನೇ ಸಾಲಿನಲ್ಲಿ ರು. 30 ಲಕ್ಷ ವೆಚ್ಚದಲ್ಲಿ ಭೋವಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ನಗರದ ರಾತ್ರಿ ವಸತಿ ರಹಿತ ನಾಗರಿಕರ ಪುನರ್ವಸತಿ ಕೇಂದ್ರದ ಕಟ್ಟಡ ನಿರ್ಮಿಸಲು ರು. 45 ಲಕ್ಷ ವ್ಯಯಿಸಲು ಉದ್ದೇಶಿಸಿದೆ. ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ಮನೆಗಳನ್ನು ನಿರ್ಮಿಸಲು, ಬಡಾವಣೆ ಅಭಿವೃದ್ಧಿಗೆ ರು. 1 ಕೋಟಿ ನಿಗದಿಪಡಿಸಲಾಗಿದೆ. ನಗರದ ನಾಲ್ಕು ಕೆರೆಗಳ ಪುನರುಜ್ಜೀವನಕ್ಕಾಗಿ ಸರ್ಕಾರದಿಂದ ರು. 4.21 ಕೋಟಿ ಅನುದಾನ ಬಿಡುಗಡೆ ನಿರೀಕ್ಷಿಸಿದೆ ಎಂದು ಹೇಳಿದರು. ಶಾಸಕ ಸೋಮಶೇಖರ ರೆಡ್ಡಿ, ಉಪಮೇಯರ್, ಪಾಲಿಕೆ ಆಯುಕ್ತ ಹಾಗೂ ಸದಸ್ಯರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com