ಹೊಸಪೇಟೆ: ಅಕ್ರಮ ಗಣಿಗಾರಿಕೆ ಕುರಿತ ತನಿಖೆ ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಅಧಿಕಾರಿಗಳ ತಂಡ ಗುರುವಾರ ಸಂಜೆ ಹೊಸಪೇಟೆ ತಾಲೂಕಿಗೆ ಆಗಮಿಸಿ ಟಿ.ಬಿ. ಡ್ಯಾಂನ ವೈಕುಂಠ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದೆ. ಸಿಇಸಿ ತಂಡದ ಮುಖ್ಯಸ್ಥ ಪಿ.ವಿ. ಜಯಕೃಷ್ಣನ್, ಮಹೇಂದ್ರ ವ್ಯಾಸ್, ಎಂ.ಕೆ. ಮಟ್ಟೋ, ಡಾ.ಯು.ವಿ. ಸಿಂಗ್, ದೀಪಕ್ ಶರ್ಮಾ, ಎಚ್.ಆರ್. ಶ್ರೀನಿವಾಸ ಅವರು ಸಂಜೆ 6ರ ಸುಮಾರಿಗೆ ಅತಿಥಿಗೃಹಕ್ಕೆ ಆಗಮಿಸಿ ನಂತರ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಗಣಿಗಾರಿಕೆಯನ್ನು ಪುನರ್ ಆರಂಭಿಸಲು ಆರ್ ಅಂಡ್ ಆರ್ ಯೋಜನೆಯಲ್ಲಿ ಎ ಕೆಟಗರಿಯಲ್ಲಿ ಬರುವ ಕೆಲ ಗಣಿ ಕಂಪನಿಗಳು ಯಾವ ರೀತಿ ಆರ್ ಅಂಡ್ ಆರ್ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಲಿದ್ದಾರೆ. ಶುಕ್ರವಾರ ಬೆಳಗ್ಗೆ ಹೊಸಪೇಟೆ, ಸಂಡೂರು ಮತ್ತು ಬಳ್ಳಾರಿ ತಾಲೂಕಿನಲ್ಲಿರುವ ಕೆಲವು ಗಣಿ ಪ್ರದೇಶಕ್ಕೆ ಈ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.