ಬಳ್ಳಾರಿ: ಲೋಕಾಯುಕ್ತರಿಗೆ ನೀಡಿದ ದೂರುಗಳನ್ನು ವಿಲೇವಾರಿ ಮಾಡಬೇಕೆಂದು ಆಗ್ರಹಿಸಿ ನೂತನವಾಗಿ ಆಯ್ಕೆಯಾಗಿರುವ ಲೋಕಾಯುಕ್ತರಿಗೆ ಫೆ. 18ರ ಸೋಮವಾರ ಮನವಿ ಮಾಡಲಾಗುತ್ತದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಲೋಕಾಯುಕ್ತರ ಎದುರು ಮೂರು ದೂರಗಳನ್ನು ಸಲ್ಲಿಸಿದ್ದೇನೆ. ಆದರೆ ಈವರೆಗೆ ತನಿಖೆಯಾಗಿಲ್ಲ. ಇದೀಗ ನೂತನ ಲೋಕಾಯುಕ್ತರು ಆಯ್ಕೆಯಾಗಿದ್ದರಿಂದ ತಮ್ಮ ಗಡಿ ಒತ್ತುವರಿ ಸೇರಿದಂತೆ ಇತರ ದೂರುಗಳನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದ ಗಡಿ ಗುರುತು ನಿಗದಿ ಮಾಡುವವರೆಗೆ ಹೋರಾಟ ಮಾಡುತ್ತೇನೆ ಎಂದರು.ರಾಜ್ಯದ ಖನಿಜ ಸಂಪತ್ತನ್ನು ಗಣಿ ಮಾಲೀಕರೊಂದಿಗೆ ಅಧಿಕಾರಿಗಳು ಶಾಮೀಲಾಗಿ ಲೂಟಿ ಮಾಡಿದ್ದಾರೆ. ಆದರೆ ಇದೀಗ ಸಿಬಿಐ ಮುಂದೆ ಗಣಿ ಮಾಲೀಕರು ಜನಾರ್ದನ ರೆಡ್ಡಿ ಒತ್ತಡಕ್ಕೆ ಮಣಿದಿದ್ದೇವೆ, ತಮ್ಮದು ತಪ್ಪಿಲ್ಲ ಎಂದು ಹೇಳುವ ಮೂಲಕ ಬಚಾವಾಗುತ್ತಿದ್ದಾರೆ. ಅಕ್ರಮ ನಡೆಯುವ ಸಂದರ್ಭದಲ್ಲಿ ಯಾವೊಬ್ಬ ಗಣಿ ಮಾಲೀಕರೂ ಧ್ವನಿ ಎತ್ತಲಿಲ್ಲ. ಇದೀಗ ತಪ್ಪೊಪ್ಪಿಗೆ ನೀಡಿ, ಅವರು ಬಚಾವಾಗುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಅಕ್ರಮದ ವಿರುದ್ಧ ಹೋರಾಟ ಮಾಡುತ್ತಾ ತಾವು ಬಂದಿದ್ದೇವೆ. ತಪ್ಪೆಸಗಿದ ಎಲ್ಲ ಗಣಿ ಮಾಲೀಕರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಪಕ್ಷ ಹೊಣೆ ಅಲ್ಲ: ಯಾವುದೇ ಒಂದು ಪಕ್ಷದ ಮುಖಂಡರು ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎಂದು ಹೇಳುವುದಿಲ್ಲ, ಯಾರು ಅಕ್ರಮ ಮಾಡುತ್ತಾರೋ ಅವರು ಹೊಣೆಯಾಗುತ್ತಾರೆ. ಅವರ ಅಕ್ರಮಕ್ಕೆ ಪಕ್ಷ ಹೇಗೆ ಹೊಣೆಯಾಗುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡರು ಮಾಡಿರುವ ಅಕ್ರಮತೆಗೆ ಅವರೇ ಹೊಣೆಗಾರರು ಹೊರತು ಪಕ್ಷವಲ್ಲ ಎಂದು ಸೂಚ್ಯವಾಗಿ ಹೇಳಿದರು. ಕಾಂಗ್ರೆಸ್ನವರು ಅಕ್ರಮ ಗಣಿಗಾರಿಕೆ ಮಾಡಿಲ್ಲವೇ ಎಂಬ ಪ್ರಶ್ನೆಗೆ, ಇಂಥವರೇ ಮಾಡಿದ್ದಾರೆ ಎಂದು ಹೇಳುವುದಿಲ್ಲ, ಯಾರು ಮಾಡಿರುತ್ತಾರೋ, ಅವರು ಶಿಕ್ಷೆ ಅನುಭವಿಸುತ್ತಾರೆಂದು ಜಾರಿಕೆ ಉತ್ತರ ನೀಡಿದರು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು. ಅಕ್ರಮ ಗಣಿಗಾರಿಕೆ ವಿರುದ್ಧ ಎಂ. ದಿವಾಕರಬಾಬು ಹಾಗೂ ಕೆ.ಸಿ. ಕೊಂಡಯ್ಯ ಅವರು ಹೋರಾಟ ಮಾಡಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಎಂ. ದಿವಾಕರಬಾಬು ಅವರಿಗೆ ಟಿಕೆಟ್ ನೀಡಬೇಕೆಂದು ಹೇಳಿದರು.