ಸಿರುಗುಪ್ಪ: ತಾಲೂಕಿನ ಕರ್ಚಿಗನೂರು ಗ್ರಾಮದ ಮಹಾಂತೇಶ್ವರ ಮಠದಲ್ಲಿ ಬಸವಪುರಾಣ ಪ್ರವಚನ ಅಂಗವಾಗಿ ಮಂಗಳವಾರ 63 ಜಂಗಮರ ಪಾದಪೂಜಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 11ಕ್ಕೆ ಗ್ರಾಮದ ಮಠದಿಂದ ಮಠಾಧೀಶರನ್ನು ಮೆರವಣಿಗೆ ಮೂಲಕ ಪೂಜಾ ಮಂಟಪಕ್ಕೆ ಕರೆ ತರಲಾಯಿತು. ಪೂಜಾ ಕಾರ್ಯಕ್ರಮವನ್ನು ವಳಬಳ್ಳಾರಿಯ ಸಿದ್ದಲಿಂಗ ಶ್ರೀಗಳು ಉದ್ಘಾಟಿಸಿ ನೀಡಿದರು. ವೇದ ಘೋಷಗಳ ಮಧ್ಯೆ ಶ್ರೀಗಳ ಪೂಜಾ ಸೇವಾ ಕಾರ್ಯ ನಡೆಯಿತು. ಹಾಲ್ವಿಯ ಅಭಿನವ ಮಹಾಂತಶ್ರೀಗಳು ಪಾದಪೂಜೆ ಸ್ವೀಕರಿಸಿದ ಸ್ವಾಮೀಜಿಯವರನ್ನು, ದಂಪತಿಗಳನ್ನು ಸತ್ಕರಿಸಿ ನೆನಪಿನ ಕಾಣಿಕೆ ನೀಡಿದರು. ಪೂಜಾ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ನೂರಕ್ಕೂ ಅಧಿಕ ಮಠಾಧೀಶರ ದರ್ಶನ ಪಡೆಯಲು ಭಕ್ತರ ನೂಕುನುಗ್ಗಲು ಉಂಟಾಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡುಬಂದಿತು.
ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಗೋಕಾಕ್ನ ಮುರುಘ ರಾಜೇಂದ್ರ ಸ್ವಾಮೀಜಿ, ಬಟಗುರ್ಕಿ ಬಸವಲಿಂಗಶ್ರೀಗಳು, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ, ಬಳ್ಳಾರಿ ಜಿಲ್ಲಾಧ್ಯಕ್ಷ ಸಾಲಿಸಿದ್ದಯ್ಯಸ್ವಾಮಿ, ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ, ದೊಡ್ಡವೀರೇಶಗೌಡ, ಕಲ್ಮಂಗಿ ಗುರುಪಾದಸ್ವಾಮಿ, ಬಿ.ಆರ್. ಚನ್ನಬಸವನಗೌಡ, ಜಿಪಂ ಸದಸ್ಯ ವಸಂತಗೌಡ, ಎನ್.ಎಂ. ಬಸವರಾಜಯ್ಯ ಇದ್ದರು.