ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 28
ಬಿಎಸ್ಸಾರ್ ಪಕ್ಷವು ಕೇಂದ್ರ ಚುನಾವಣಾ ಆಯೋಗದ ನಿಯಮದಂತೆ ರಚನೆಗೊಂಡಿದ್ದರೂ, ಬಳ್ಳಾರಿ ಜಿಲ್ಲಾಧಿಕಾರಿಗಳು ತಮ್ಮದು ರಾಜಕೀಯ ಪಕ್ಷವಲ್ಲ ಎಂದು ಹೇಳಿ ತಮ್ಮ ಪಕ್ಷ ಅರ್ಭ್ಯ್ಙಗಳನ್ನು ಪಕ್ಷೇತರ ಅಭ್ಯರ್ಥಿಗಳೆಂದು ಘೋಷಿಸಿದ್ದಾರೆ. ಪಕ್ಷ ಚಿಹ್ನೆಯನ್ನು ನ್ಯಾಯಾಲಯದ ನಿರ್ದೇಶನದಂತೆ ಪಡೆದಿದೆ ಎಂದು ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ತಿಳಿಸಿದರು.
ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪಪಂ ವ್ಯಾಪ್ತಿಯ ದೇವಿನಗರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸೀಲಿಂಗ್ ಫ್ಯಾನ್ ಚಿಹ್ನೆ ನೀಡಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ 34 ಅಭ್ಯರ್ಥಿಗಳ ಪೈಕಿ 4 ಜನರಿಗೆ ಅನ್ಯ ಚಿಹ್ನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಶುಕ್ರವಾರ ಮತ್ತು ಶನಿವಾರ ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುತ್ತದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮಾ. 7ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲು ಯತ್ನಿಸಿದ್ದರು. ಅಧಿಕಾರ ವಿಕೇಂದ್ರೀಕರಣವಾಗಲು ಚುನಾವಣೆ ಅಗತ್ಯವಿದೆ. ಬಿಜೆಪಿ ಮತ್ತು ಕಾಂಗ್ರೆಸ್ಸಿಗರು ಇದನ್ನು ಮುಂದೂಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅವರ ಶಕ್ತಿ ಇಲ್ಲಿ ಬಳಕೆಯಾಗಲಿಲ್ಲ ಎಂದರು.
ಬಿಎಸ್ಸಾರ್ ಅಭ್ಯರ್ಥಿಗಳಾದ ವಿಜಯಲಕ್ಷ್ಮಿ, ಭೀಮಲಿಂಗಪ್ಪ, ಪಕ್ಷದ ಮುಖಂಡರಾದ ಡಾ.ಎಸ್.ಜೆ.ವಿ. ಮಹಿಪಾಲ್, ಸೂರಿಬಾಬು, ತಿಮ್ಮಪ್ಪ, ರುದ್ರಗೌಡ, ತಿಪ್ಪಾರೆಡ್ಡಿ, ಅಲ್ಲಂ ಚೆನ್ನಪ್ಪ, ಮಲ್ಲಿಕಾರ್ಜುನ, ಸಿದ್ದಪ್ಪ, ಜಿಪಂ ಸದಸ್ಯ ವಸಂತಗೌಡ, ಮಹೇಶ್ ರೆಡ್ಡಿ, ಸಿದ್ದರಾಮಯ್ಯಸ್ವಾಮಿ ಇದ್ದರು.