ಬಜೆಟ್ ಜನಸಾಮಾನ್ಯರ ಮೇಲೆ ಹಿಂಬಾಗಿಲ ಮೂಲಕ ಹೊರೆಯಾಗುವ ಲಕ್ಷಣ ಕಂಡುಬರುತ್ತದೆ. ಅಗ್ಗದ ಜನಪ್ರಿಯತೆಗಾಗಿ ಸಬ್ಸಿಡಿಗಳನ್ನು ಪ್ರಕಟಿಸಿ, ಪೂರ್ಣ ಪ್ರಮಾಣದಲ್ಲಿ ಅದರ ಲಾಭ ದಕ್ಕದಂತಹ ಜಾಣತನವನ್ನು ಸಚಿವರು ತೋರಿಸಿದ್ದಾರೆ.
-ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮೊದಲಿನಿಂದಲೂ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಲೇ ಬರುತ್ತಿದೆ.
- ಶ್ರೀರಾಮುಲು, ಬಿಎಸ್ಸಾರ್ ಅಧ್ಯಕ್ಷ
ಆರ್ಥಿಕ ಸದೃಢತೆಗೆ ಒತ್ತು ಕೊಟ್ಟಿರುವುದು ಸ್ವಾಗತಾರ್ಹ. ಆದರೆ ವ್ಯವಸಾಯ ಕ್ಷೇತ್ರಕ್ಕೆ ಒತ್ತು ಕೊಟ್ಟರೂ ಮಾರುಕಟ್ಟೆ ನಿಯಂತ್ರಿಸಲು ವೈಜ್ಞಾನಿಕ ಸೂತ್ರ ರಚಿಸಿಲ್ಲ. ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಿಲ್ಲ.
-ಸಿರಿಗೇರಿ ಪನ್ನರಾಜ, ಬಳ್ಳಾರಿ
ಬಜೆಟ್ನಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ. ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದೆ. ಆದರೆ ಮಹಿಳಾ ಬ್ಯಾಂಕ್ ಸ್ಥಾಪನೆಯಿಂದ ಅಷ್ಟಾಗಿ ಉಪಯೋಗವಾಗುವುದಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಅದು ತಲುಪುವುದಿಲ್ಲ.
-ಮಂಜಪ್ಪ ಡಿ. ಹೊಸಮನಿ, ಕುಲಪತಿ
ಕೇಂದ್ರ ಬಜೆಟ್ ಜನ ಸಾಮಾನ್ಯರಿಗೆ ಹಾಗೂ ರೈತರಿಗೆ ಉಪಯುಕ್ತವಾದ ರೀತಿಯಲ್ಲಿದ್ದರೆ ಮತ್ತೊಂದು ಕಡೆ ಶ್ರೀಮಂತರ ಆದಾಯ ತೆರಿಗೆ ತಪ್ಪಿಸುವ ಒಳ ಮಾರ್ಗಗಳನ್ನು ಸಹ ಈ ಬಜೆಟ್ನಲ್ಲಿ ತೋರಿಸಿ, ಅವರನ್ನು ಓಲೈಸಲಾಗಿದೆ.
- ಕೆ. ಶಿವಮೂರ್ತಿ, ಹೊಸಪೇಟೆ
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚಿದಂಬರಂ ಬಜೆಟ್ ಮಂಡಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಜನಪರ ಬಜೆಟ್ ಮಂಡಿಸಿದ್ದಾರೆ.
-ಪಿ. ಅಬ್ದುಲ್, ರಂಗಕರ್ಮಿ
ಶ್ರೀಸಾಮಾನ್ಯ, ರೈತವರ್ಗಕ್ಕೆ ಈ ಬಜೆಟ್ನಿಂದ ಯಾವುದೇ ಉಪಯೋಗವಿಲ್ಲ. ಸುಧಾರಣೆ ನೆಪದಲ್ಲಿ ಸಬ್ಸಿಡಿಯನ್ನು ಸಂಪೂರ್ಣ ಕಿತ್ತುಕೊಳ್ಳಲು ಚಿದಂಬರ್ಂ ಮುನ್ಸೂಚನೆ ನೀಡಿದ್ದಾರೆ. ಕೇಂದ್ರ ಬಜೆಟ್ ಜನವಿರೋಧಿಯಾಗಿದೆ.
-ವೈ. ಮಲ್ಲಿಕಾರ್ಜುನ, ಜೆಡಿಎಸ್ ಅಧ್ಯಕ್ಷ
ಮೊಟ್ಟಮೊದಲ ಬಾರಿಗೆ ಮಹಿಳಾ ಬ್ಯಾಂಕ್ ಸ್ಥಾಪನೆಗೆ ಮುಂದಾಗಿರುವುದು ಹಾಗೂ ಹತ್ತು ಸಾವಿರ ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಎಲ್ಐಸಿ ಶಾಖೆ ತೆರೆಯುವ ನಿರ್ಧಾರ ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲು ಮುನ್ನಡಿಯಾಗಲಿದೆ.
- ಎಚ್.ಪಿ. ಶಿವಶಂಕರಗೌಡ
ಕೇಂದ್ರದ ಬಜೆಟ್ ಸಮನ್ವಯದ ಬಜೆಟ್ನಂತಿದ್ದರೂ ಬಡ, ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯ್ತಿ ನೀಡಿರುವು ಉತ್ತಮ. ಜನಪರ ಕಾರ್ಯಕ್ರಮಗಳನ್ನು ಬಜೆಟ್ನಲ್ಲಿ ಸೇರಿಸಿದ್ದರೂ ಇತಿಮಿತಿಗಳ ಕೊರತೆ ಬಜೆಟ್ನಲ್ಲಿ ಎದ್ದು ಕಾಣುತ್ತದೆ.
-ಡಾ. ತರಸಾಲಪ್ಪ, ಕೂಡ್ಲಿಗಿ
ರಾಷ್ಟ್ರೀಯ ಮಹಿಳಾ ಬ್ಯಾಂಕ್ ಸ್ಥಾಪನೆಗೆ ರು. 1 ಸಾವಿರ ಕೋಟಿ ಮೀಸಲಿಟ್ಟಿರುವುದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ. ಗೃಹಸಾಲ ಬಡ್ಡಿ ವಿನಾಯಿತಿಯನ್ನು ಏರಿಕೆ ಮಾಡಿರುವುದು ಅನುಕೂಲವಾಗಲಿದೆ.
- ಕೆ. ಪ್ರಕಾಶ್, ಬ್ಯಾಂಕ್ ಉದ್ಯೋಗಿ