29ರಿಂದ ಅಖಿಲ ಭಾರತ ಮಹಿಳಾ ಸಮ್ಮೇಳನ

Updated on: 

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 22
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಜ. 29ರಿಂದ ಮೂರು ದಿನಗಳ ಕಾಲ ಕೇರಳದ ತಿರುವನಂತಪುರಂನಲ್ಲಿ ನಡೆಯುವ 3ನೇ ಅಖಿಲ ಭಾರತ ಮಹಿಳಾ ಸಮ್ಮೇಳನ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ತಾರತಮ್ಯ ವಿರುದ್ಧ ಧ್ವನಿಯಾಗಲಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಮಂಜುಳಾ ಅಭಿಪ್ರಾಯಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಮಹಿಳೆ ಪರ ಧ್ವನಿಗಳು ಮೊಳಗಲಿವೆ. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಮಹಿಳೆಯರ ಜೀವನ ಉತ್ತಮವಾಗುವ ನಿಟ್ಟಿನಲ್ಲಿ ಸಮ್ಮೇಳನ ಮಹತ್ವ ಪಡೆದುಕೊಂಡಿದೆ. ಈ ಸಮ್ಮೇಳನದಲ್ಲಿ ಅಮೆರಿಕ, ಟರ್ಕಿ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜ. 29ರಂದು ಸಂಜೆ 4ಕ್ಕೆ ತಿರುವನಂತಪುರದ ಪುತ್ತರಿಕಂಡಮ್ ಮೈದಾನದಲ್ಲಿ ಬಹಿರಂಗ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ ಕಡೆಗಳಿಂದ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ರಾಜ್ಯದಿಂದ 300 ಜನಪ್ರತಿನಿಧಿಗಳು ಹಾಗೂ 200 ಜನರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಒಟ್ಟು 1500 ಪ್ರತಿನಿಧಿಗಳು ಭಾಗವಹಿಸುವರು ಎಂದರು.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಎಂ.ಎನ್. ವೆಂಕಟಾಚಲಯ್ಯ ಸಮ್ಮೇಳನ ಉದ್ಘಾಟಿಸಲಿದ್ದು, ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಸುರೇಶ್ ಹೊಸ್‌ಬೆಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಐಎಂಎಸ್‌ಎಸ್‌ನ ಅಖಿಲ ಭಾರತ ಅಧ್ಯಕ್ಷೆ ಛಾಯಾ ಮುಖರ್ಜಿ ಅಧ್ಯಕ್ಷತೆ ವಹಿಸುವರು. ಮಲ್ಲಿಕಾ ಸಾರಾಭಾಯ್ ಅವರಿಂದ ಸಾಮಾಜಿಕ ಮಹಿಳಾ ಕಾರ್ಯಕರ್ತರ ಕುರಿತಾಗಿ ನೃತ್ಯ ರೂಪಕ ನಡೆಯಲಿದೆ. ಅಂಕುರ ಸಾಂಸ್ಕೃತಿಕ ವೇದಿಕೆಯಿಂದ ಪ್ರತಿಜ್ಞಾ ಪಂಚಾಲಿ ಯಕ್ಷಗಾನ ಶೈಲಿಯ ನೃತ್ಯ ರೂಪಕ ಹಾಗೂ ಹೆಣ್ಣು ಮಕ್ಕಳಿಂದ ಡೊಳ್ಳು ಕುಣಿತ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಭುವನಾ, ಶಾಂತಾ, ಈಶ್ವರಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com