ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜ. 24
ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತ ವಾರ್ಷಿಕ ಸಾಮಗ್ರಿ ಖರೀದಿಯಲ್ಲಿ ದುರುಪಯೋಗಕ್ಕಿಂತ ನಿರ್ಲಕ್ಷ್ಯ ವಹಿಸಿದ್ದು ಸ್ಪಷ್ಟವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್ಪೆಕ್ಟರ್ ಶಾಮೀದ್ ಬಾಷಾ ತಿಳಿಸಿದರು.
ಇಲ್ಲಿನ ಪಟ್ಟಣ ಪಂಚಾಯತಿ ಕಾರ್ಯಾಲಯಕ್ಕೆ ಎರಡನೇ ಬಾರಿ ಪರಿಶೀಲನೆಗೆ ಬುಧವಾರ ಆಗಮಿಸಿದ್ದ ಅವರು ಬೆಳಗ್ಗೆ 11ರಿಂದ ರಾತ್ರಿ 8ರ ವರೆಗೂ ವಿವಿಧ ದಾಖಲೆಗಳನ್ನು ವೀಕ್ಷಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 2007ರಿಂದ 12ನೇ ನಡುವಿನ ಪಪಂ ವ್ಯವವಾರ ಪರಿಶೀಲಿಸಲಾಗಿದೆ. ಯಾವುದೇ ಹಂತದಲ್ಲಿ ಅನುದಾನ ದುರುಪಯೋಗ ಆಗಿಲ್ಲ. ಆದರೆ, ಖರೀದಿಸಿದ ಸಾಮಗ್ರಿಗಳನ್ನು ಸುಮಾರು ಎರಡುವರೆ ವರ್ಷಗಳಿಂದ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದು, ಇದು ಅಕ್ಷಮ್ಯ. ಖರೀದಿಸಿದ ಸಾಮಗ್ರಿ ಬಳಕೆಗೆ 8-10 ದಿನಗಳಲ್ಲೇ ಮುಂದಾಗಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
2009-10ರಲ್ಲಿ ಫಲಾನುಭವಿಗಳಿಗೆ ವಿತರಿಸಲೆಂದು ರು. 4.98 ಲಕ್ಷ ವೆಚ್ಚದಲ್ಲಿ 15 ಕಂಪ್ಯೂಟರ್, 2010-11ರಲ್ಲಿ ರು. 7.78 ಲಕ್ಷ ವೆಚ್ಚದಲ್ಲಿ 21 ಕಂಪ್ಯೂಟರ್ ಹಾಗೂ 2012-13ನೇ ಸಾಲಿನಲ್ಲಿ ರು. 7.99 ಲಕ್ಷ ವೆಚ್ಚದಲ್ಲಿ 11 ಕಂಪ್ಯೂಟರ್ ಖರೀದಿಸಲಾಗಿದೆ. ಒಟ್ಟು 71 ಕಂಪ್ಯೂಟರ್ ಖರೀದಿಸಲಾಗಿದ್ದು, ಈ ಪೈಕಿ 24ನ್ನು ಕಿಯೋನಿಕ್ಸ್ ಕಂಪನಿಯಿಂದ, ಉಳಿದುವನ್ನು ಡಿಜಿಎಸ್ ಮತ್ತು ಡಿ ಆಧಾರದಲ್ಲಿ ಖಾಸಗಿಯವರಿಂದ ಖರೀದಿಸಲಾಗಿದೆ. ಇದರಲ್ಲಿ ಭಾರಿ ಅವ್ಯವಹಾರ ಆಗಿದೆ ಎಂದು ಪಪಂ ಸದಸ್ಯೆ ಕೆ.ಎಸ್. ವೀಣಾ ವಿವೇಕಾನಂದಗೌಡ ದೂರು ಸಲ್ಲಿಸಿದ್ದರು. ಇದರಲ್ಲಿ ಹುರುಳಿಲ್ಲ ಎಂಬುದು ಪರಿಶೀಲನೆಯಿಂದ ಗೊತ್ತಾಗಿದೆ ಎಂದರು.
ಎಸ್ಸಿ ಎಸ್ಟಿ ಜನಾಂಗದವರ ಬಡಾವಣೆಗಳಲ್ಲಿ ಗ್ರಂಥಾಲಯಗಳಿಲ್ಲದಿದ್ದರೂ ರು. 10.8 ಲಕ್ಷ ವ್ಯಯಿಸಿ ಪೀಠೋಪಕರಣ, ರು. 3 ಲಕ್ಷ ವೆಚ್ಚ ತೋರಿಸಿ ಪುಸ್ತಕಗಳನ್ನು ಖರೀಸಲಾಗಿದೆ. ಮುಂಗಡವಾಗಿ ಪೀಠೋಪಕರಣ-ಪುಸ್ತಕ ಖರೀದಿಸಿ ಈಗ ಗ್ರಂಥಾಲಯಗಳ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಟ್ಟಡ ನಿರ್ಮಾಣದ ಬಳಿಕ ಸಾಮಗ್ರಿ ವಿತರಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾಗಿ ಬಾಷಾ ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಹನುಮಂತಮ್ಮ, ಚಂದ್ರಶೇಖರ್ ಉಪಸ್ಥಿತರಿದ್ದರು.