ಕೊಟ್ಟೂರು: ಉಜ್ಜಯಿನಿ ಸದ್ಧರ್ಮ ಪೀಠದ ಲಿಂಗೈಕ್ಯ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಯವರ 77ನೇ ಪುಣ್ಯಸ್ಮರಣೆ ನಿಮಿತ್ತ ಹಾಲಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಯವರ ಪೂಜಾನುಷ್ಠಾನ ಮತ್ತು ಧಾರ್ಮಿಕ ಕಾರ್ಯಕ್ರಮ ಜ. 26 ರಿಂದ 30ರ ವರೆಗೆ ಚಿಕ್ಕಮಗಳೂರು ಜಿಲ್ಲೆ ತರಿಕೇರೆ ತಾಲೂಕು ಬುಕ್ಕಾಂಬುಧಿ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಉಜ್ಜಯಿನಿ ಪೀಠದ ಪ್ರಕಟಣೆ ತಿಳಿಸಿದೆ. ಲಿಂಗೈಕ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಜಗದ್ಗುರುಗಳು 1924ರಲ್ಲಿ ಬುಕ್ಕಾಂಬುಧಿಯಲ್ಲಿ 4 ತಿಂಗಳ ಕಾಲ ನಿರಂತರ ತಪಗೈದು ರಂಭಾಪುರಿ ಪೀಠಕ್ಕೆ ಬಂದೊದಗಿದ ಕಾನೂನಾತ್ಮಕ ಆಪತ್ತನ್ನು ನಿವಾರಿಸಿದ್ದಲ್ಲದೇ, ಆ ಭಾಗದಲ್ಲಿ ಮಳೆ, ಬೆಳೆ ಬೀಳಲು ತಮ್ಮ ಪೂಜಾಫಲವನ್ನು ಉಪಯೋಗಿಸಿ ಜನಾನುರಾಗಿದ್ದರು ಎಂಬ ಪ್ರತಿತಿ ಇದೆ. ಈ ಕಾರಣಕ್ಕಾಗಿಯೇ ಬುಕ್ಕಾಂಬುಧಿಯ ಗುಹೆಯಲ್ಲಿ 4 ದಿನಗಳ ಕಾಲ ವಿವಿಧ ಬಗೆಯ ಕಾರ್ಯಕ್ರಮಗಳೊಂದಿಗೆ ಪೂಜಾನುಷ್ಠಾನಗಳು ನಡೆಯಲಿವೆ. ಜನವರಿ 30ರಂದು ನಡೆಯುವ ಉಜ್ಜಯಿನಿ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಯವರ ಪೂಜಾನುಷ್ಠಾನ ಮತ್ತು ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಕೊಟ್ಟೂರು ಸಮೀಪದ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪುಣ್ಯಾರಾಧನಾ ಸಮಾರಂಭ ಜನವರಿ 31ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ಜಂಗಮ ವಟುಗಳಿಂದ ಪೂಜೆ, ಪ್ರಸಾದ ಸೇವನೆ ನಡೆಯಲಿದೆ. ನಂತರ ಸಿದ್ಧಲಿಂಗ ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.