ಕೊಟ್ಟೂರು: ಪಟ್ಟಣದ ವಿವಿಧ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಂದ 64ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಪಂ ಅಧ್ಯಕ್ಷೆ ಕಾಸಲ ಸಾವಿತ್ರಮ್ಮ ದ್ವಜಾರೋಹಣ ನೆರವೇರಿಸಿದರು. ಪಟ್ಟಣದಲ್ಲಿನ ಶಾಲಾ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪಥಸಂಚಲನದ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಭ್ರಮಿಸಿದರು.
ಹಾರದ ರಾಷ್ಟ್ರ ಧ್ವಜ: ಶಾಲಾ ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ಸಂಭ್ರಮ ಮೇರೆ ಮೀರಿದ್ದರೆ ಇಲ್ಲಿನ ಬಸ್ ನೀಲ್ದಾಣ, ಕಾರ್ಪೋರೇಷನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರುಗಳಿಂದ ಗಣರಾಜ್ಯೋತ್ಸವ ಸಮಾರಂಭ ತಮಗೆ ಸಂಬಂಧವಿಲ್ಲವೆಂಬಂತೆ ಕಳೆದ 2 ದಿನಗಳಿಂದ ಘೋಷಣೆಯಾಗಿದ್ದ ರಜಾದ ಮಜಾ ಅನುಭವಿಸಲು ಬೀಗ ಜಡಿದಿದ್ದರು. ಬಸ್ ನಿಲ್ದಾಣದಲ್ಲಿ ಪ್ರತಿ ವರ್ಷ ಧ್ವಜಾರೋಹಣ ನೆರವೇರಿಸಲಾಗುತ್ತಿತ್ತು. ಆದರೆ ಈ ಬಾರಿ ಧ್ವಜಾರೋಹಣ ನೆರವೇರಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. ಧ್ವಜದ ಕಂಬವನ್ನು ಅಳವಡಿಸಲು ನಿಲ್ದಾಣದಲ್ಲಿ ಅವಕಾಶ ಇಲ್ಲವಾಗಿದೆ. ಈ ಕಾರಣಕ್ಕಾಗಿ ಈ ಬಾರಿ ಧ್ವಜಾರೋಹಣ ನೆರವೇರಿಸಲಾಗಲಿಲ್ಲ. ಮುಂದಿನ ಬಾರಿ ಗಣರಾಜ್ಯೋತ್ಸವ ಕಾಲಕ್ಕೆ ಧ್ವಜಾರೋಹಣ ನೆರವೇರಿಸಲು ಧ್ವಜ ಕಂಬವನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಶಾಸಕರ ಮೊರೆ ಹೋಗುತ್ತೇವೆ ಎಂದು ಬಸ್ ನಿಲ್ದಾಣದ ಸಿಬ್ಬಂದಿ 'ಕನ್ನಡಪ್ರಭ'ದ ಬಳಿ ಹೇಳಿ ಜಾರಿಕೊಂಡರು.
ಬ್ಯಾಂಕ್ನವರು ಆಗಸ್ಟ್ 15 ಮತ್ತು ಜನವರಿ 26ರ ಪ್ರತಿ ವರ್ಷವೂ ಧ್ವಜಾರೋಹಣ ನೆರವೇರಿಸದೇ ಇರುವ ಬಗ್ಗೆ ಸಮಜಾಯಿಷಿ ಕೇಳಿದರೆ, ವಿಶಾಲ ಕಟ್ಟಡವೊಂದಿದ ಮೇಲೆ ಖಂಡಿತಾ ಧ್ವಜಾರೋಹಣ ನೆರವೇರಿಸುತ್ತೇವೆಂದು ಹೇಳುತ್ತಾರೆ. ಕಳೆದ 2 ವರ್ಷಗಳಿಂದ ಸ್ಟೇಟ್ ಬ್ಯಾಕ್ ಆಫ್ ಮೈಸೂರು ಮತ್ತು ಕಾರ್ಪೋರೇಷನ್ ಬ್ಯಾಂಕ್ ವಿಶಾಲವಾದ ಪ್ರತ್ಯೇಕ ಕಟ್ಟಡಗಳನ್ನು ವ್ಯವಸ್ಥಿತ ರೀತಿಯಲ್ಲಿ ಹೊಂದಿವೆ. ಆದರೂ ರಾಷ್ಟ್ರೀಯ ಹಬ್ಬದ ಈ ದಿನಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಗೋಜಿಗೆ ಸಿಬ್ಬಂದಿ ಮುಂದಾಗದೇ ರಜಾದ ಮಜಾ ಅನುಭವಿಸಲು ಮುಂದಾಗಿರುವುದು ಪಟ್ಟಣದ ಪ್ರಜ್ಞಾವಂತ ಜನರ ಹುಬ್ಬೇರಿಸುವಂತೆ ಮಾಡಿದೆ.