ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 29
ಬೇಸಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೀರಿನ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ಸಂಸದೆ ಜೆ. ಶಾಂತಾ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು. ಬೇಸಿಗೆ ಸಮೀಪಿಸುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ತೊಂದರೆ ವಿಪರೀತವಾಗಿ ಕಾಡುವುದರಿಂದ ಅಧಿಕಾರಿಗಳು ತುರ್ತಾಗಿ ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಚಿಣ್ಣರ ಅಂಗಳ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಮುಖ್ಯವಾಹಿನಿಗೆ ತರಬೇಕು. ಸರ್ವ ಶಿಕ್ಷಣ ಅಭಿಯಾನದಡಿ ನಗರ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಕಾಂಪೌಂಡ್ಗಳ ನಿರ್ಮಾಣಕ್ಕಾಗಿ ಹಣ ಬಿಡುಗಡೆಯಾಗಿದ್ದು, ಕಾಮಾಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ನೈರ್ಮಲ್ಯ ಕಾಪಾಡಿ: ಸಂಪೂರ್ಣ ನೈರ್ಮಲ್ಯ ಆಂದೋಲನದಡಿ ವಿಭಾಗ ಹಾಗೂ ರಾಜ್ಯ ನೈರ್ಮಲ್ಯ ಪ್ರಶಸ್ತಿ ಪಡೆದ ಗ್ರಾಮ ಪಂಚಾಯ್ತಿಗಳು, ಗ್ರಾಮಗಳು, ಗ್ರಾಮ ನೈರ್ಮಲ್ಯ, ಶಾಲಾ ನೈರ್ಮಲ್ಯ, ಅಂಗನವಾಡಿ ನೈರ್ಮಲ್ಯವನ್ನು ಕಾಪಾಡಿ, ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಪ್ರಶಸ್ತಿ ಬಂದ ಮೊತ್ತವನ್ನು ವೆಚ್ಚ ಮಾಡಲು ಕ್ರಿಯಾ ಯೋಜನೆ ತಯಾರಿಸಿ, ಅನುಮತಿ ಪಡೆಯಬೇಕು. ಎಸ್ಜಿಎಸ್ವೈ ಪ್ರಗತಿಯನ್ನು ಮಾರ್ಚ್ ಒಳಗಾಗಿ ಶೇ. 100ರಷ್ಟು ಸಾಧಿಸಬೇಕು. ವಸತಿ ಯೋಜನೆಯಡಿ ಬಾಕಿ ಇರುವ ಮನೆಗಳನ್ನು ಮುಂದಿನ ವರ್ಷದ ಯೋಜನೆಯಲ್ಲಿ ಸೇರಿಸಿಕೊಂಡು ಕಾಮಗಾರಿ ಪೂರ್ಣಗೋಳಿಸಬೇಕು ಎಂದು ತಿಳಿಸಿದರು.
ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ನಾಯ್ಕ್ ಅವರು ಪ್ರಗತಿ ಪರಿಶೀಲನೆ ನಡೆಸಿ, ಮೂರನೇ ಪಾರ್ಟಿ ವಿಸಿಟ್ ಆಗಿ ಬಾಕಿ ಹಣ ಪಾವತಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಬಳ್ಳಾರಿ ಮತ್ತು ಸಿರುಗುಪ್ಪ ಹೊರತುಪಡಿಸಿ ಪ್ರಸ್ತಾವನೆ ಬಂದಿದ್ದು, ಒಟ್ಟು # 5.36 ಕೋಟಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೆಎಚ್ಎಸ್ಆರ್ಡಿಪಿ ಯೋಜನೆಯಡಿಯ ಕಾಮಗಾರಿಗಳನ್ನು ಕೂಡಲೆ ಪೂರ್ಣಗೊಳಿಸಬೇಕು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಕೇಂದ್ರ ಪುರಸ್ಕೃತ ಯೋಜನೆಯಡಿ ಬಿಡುಗಡೆಯಾದ ಹಣವನ್ನು ಮಾರ್ಚ್ ಒಳಗಾಗಿ ವೆಚ್ಚ ಮಾಡಿ ಯು ಸಿ ಯನ್ನು ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಕೊಪ್ಪಳ ಸಂಸದ ಶಿವರಾಮಗೌಡ ಸೇರಿದಂತೆ ವಿವಿಧ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.