ಹೊಸಪೇಟೆ: ಬಿಕಾಂ ಮೂರನೇ ಸೆಮಿಸ್ಟರ್ನ ಲೆಕ್ಕಶಾಸ್ತ್ರದ ವಿಷಯದ ಮೌಲ್ಯಮಾನ ದೋಷದಿಂದ ಕೂಡಿರುವುದರಿಂದ ಮರುಮೌಲ್ಯಮಾಪನ ಮಾಡಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ಸಂಘಟನೆ ಪದಾಧಿಕಾರಿಗಳು ಗುರುವಾರ ವಿಜಯನಗರ ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಎಸ್ಎಫ್ಐ ತಾಲೂಕು ಅಧ್ಯಕ್ಷ ಟಿ. ಶರತಕುಮಾರ್ ಮಾತನಾಡಿ, ಕಾಲೇಜಿನ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳ ಮೂರನೇ ಸೆಮಿಸ್ಟರ್ನ ಲೆಕ್ಕಶಾಸ್ತ್ರದ ಮೌಲ್ಯಮಾಪನ ದೋಷಪೂರಿತವಾಗಿದೆ. ಈ ಕೂಡಲೇ ಉಚಿತವಾಗಿ ಮರುಮೌಲ್ಯಮಾಪನ ಮಾಡಬೇಕು ಎಂದು ಅವರು ಆಗ್ರಹಿಸಿದರು. ತಾಲೂಕು ಕಾರ್ಯದರ್ಶಿ ಪಂಪಾನಂದ ಮಾತನಾಡಿ, ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆರಂಭವಾಗಿ ಮೂರು ವರ್ಷ ಕಳೆದರೂ ಸರಿಯಾದ ಮೌಲ್ಯಮಾಪನಕ್ಕೆ ಗಮನಹರಿಸುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ವಿವಿಯವರು ಸ್ಪಂದಿಸುತ್ತಿಲ್ಲ ಎಂದು ಆರೇಪಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ. ಸುರೇಶ್ ಚವ್ಹಾಣ್, ತಾಲೂಕು ಉಪಾಧ್ಯಕ್ಷೆ ವಿಜಯಶ್ರೀ, ತಾಲೂಕು ಸಹಕಾರ್ಯದರ್ಶಿ ವಸಂತ ಕಲಾಲ, ರಮೇಶ, ಖಾದಭಾಷ, ಭೀಮನಗೌಡ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಿಜಯನಗರ ಕಾಲೇಜು ಪ್ರಾಚಾರ್ಯ ಪೊಲೀಸ್ ಪಾಟೀಲ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ವಿಜಯನಗರ ಕಾಲೇಜು ಮುಂದೆ ಕೆಲಕಾಲ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.