ಬಳ್ಳಾರಿ: ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರಿ ಸಮಿತಿಯ ಅಧ್ಯಕ್ಷ ತ್ರಿವಿಕ್ರಮ ಜೋಷಿ ಅವರು ಫೆ. 1ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಪಂಚಾಯ್ತಿ ನಜೀರ್ ಸಭಾಂಗಣದಲ್ಲಿ 2012-13ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯ (ಎಸ್ಡಿಪಿ) ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ತರಬೇತಿ ಕೇಂದ್ರ ಉದ್ಘಾಟನೆ
ಬಳ್ಳಾರಿ: ತೋಟಗಾರಿಕಾ ಇಲಾಖೆಯ ರಾಷ್ಟ್ರೀಯ ವಿಕಾಸ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡಿರುವ ತೋಟಗಾರಿಕಾ ತರಬೇತಿ ಕೇಂದ್ರದ ಕಟ್ಟಡದ ಉದ್ಘಾಟನಾ ಸಮಾರಂಭ ಫೆ. 1ರಂದು ಸಂಜೆ 4 ಗಂಟೆಗೆ ಹಗರಿಬೊಮ್ಮನಹಳ್ಳಿ ತಾಲೂಕು ಮಾಲವಿ ಗ್ರಾಮದ ತೋಟಗಾರಿಕಾ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಇಲಾಖೆ ಉಪನಿರ್ದೇಶಕ ಪಿ.ಎಸ್. ಕುಲಕರ್ಣಿ ತಿಳಿಸಿದ್ದಾರೆ. ನಂದಿಪುರದ ಮಹೇಶ್ವರ ಸ್ವಾಮೀಜಿ ಹಾಗೂ ಹಳೆಹಗರಿಬೊಮ್ಮನಹಳ್ಳಿಯ ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದ್ದು, ತೋಟಗಾರಿಕೆ ಮತ್ತು ಸಕ್ಕರೆ ಖಾತೆ ಸಚಿವ ಎಸ್.ಎ. ರವೀಂದ್ರನಾಥ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಕೆ. ನೇಮಿರಾಜ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಜಿಪಂ ಅಧ್ಯಕ್ಷೆ ಸುಮಂಗಲಮ್ಮ ಗುಬಾಜಿ, ಉಪಾಧ್ಯಕ್ಷೆ ಮಮತಾ ಸುರೇಶ್, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಹಗರಿಬೊಮ್ಮನಹಳ್ಳಿ ತಾಪಂ ಅಧ್ಯಕ್ಷೆ ಡಿ. ವಿಜಯಲಕ್ಷ್ಮಿ, ಉಪಾಧ್ಯಕ್ಷೆ ಕುರುಬರ ನಾಗರತ್ನಮ್ಮ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
4ರಂದು ತಾಪಂ ಸಭೆ
ಬಳ್ಳಾರಿ: ಬಳ್ಳಾರಿ ತಾಪಂ ಸಾಮಾನ್ಯ ಸಭೆ ಫೆ. 4ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕಾರಣಾಂತರಗಳಿಂದ ಈ ಸಭೆ ಮುಂದೂಡಲಾಗಿತ್ತು. ಸಭೆಗೆ ತಾಲೂಕು ಪಂಚಾಯ್ತಿ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಘವರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.