ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 1
ಚುನಾವಣಾ ಪ್ರಚಾರಕ್ಕೆ ನಾಲ್ಕು ದಿನ ಉಳಿದ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಬಿರುಸಿನಿಂದ ಕೈಗೊಂಡಿವೆ. ಆದರೆ ಎಲ್ಲರಿಗೂ ಇರುವುದು ಕತ್ತಲರಾತ್ರಿ ಭೀತಿ. ಇಷ್ಟೆಲ್ಲ ಪ್ರಚಾರ ಮಾಡಿದರೂ ಮತದಾನದ ಮುನ್ನಾ ದಿನ ಕತ್ತಲ ರಾತ್ರಿಯ ಕರಾಮತ್ತು ತಮ್ಮ ಪ್ರಚಾರವನ್ನು ನುಂಗಿ ಹಾಕುತ್ತಾ ಎಂಬ ಭೀತಿ ಆವರಿಸಿದೆ.
ಕಾಂಗ್ರೆಸ್ ಒಗ್ಗಟ್ಟಿನ ಬಲಪ್ರದರ್ಶನ ಮಾಡಿದರೂ ಕತ್ತಲ ರಾತ್ರಿ ಕರಾಮತ್ತಿನಲ್ಲಿ ಅಭ್ಯರ್ಥಿಗಳು ನಲುಗಿ ಹೋಗುತ್ತಾರೆ ಎಂಬ ಭೀತಿ ಇದೆ. ಬಿಜೆಪಿಯೂ ಇದಕ್ಕೆ ಹೊರತಾಗಿಲ್ಲ. ಜೆಡಿಎಸ್ ಕೊಂಚ ಭಿನ್ನ. ಚುನಾವಣೆ ಎಂದಾಕ್ಷಣ ಒಗ್ಗಟ್ಟಿನ ಪ್ರದರ್ಶನ, ಅಬ್ಬರದ ಪ್ರಚಾರ ಎಷ್ಟೇ ಇದ್ದರೂ ಪ್ರಚಾರಕ್ಕೆ ಮಸಾಲೆಯಂತೆ ದುಡ್ಡು ಇರಬೇಕೆಂಬುದು ಎಲ್ಲರಿಗೂ ತಿಳಿದ ವಿಷಯ.
ಆದರೂ ಮೇಲ್ನೋಟಕ್ಕೆ ಯಾರೂ ಇದನ್ನು ಹೇಳುವುದಿಲ್ಲ. ಬಿಎಸ್ಸಾರ್, ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಪಕ್ಷಗಳಿಗೆ ಆಯಾ ಜಿಲ್ಲಾ ಮುಖಂಡರೇ ಸ್ಟಾರ್ ಕ್ಯಾಂಪೇನರ್ಗಳಾಗಿದ್ದಾರೆ.
ಎಲ್ಲ ಪಕ್ಷಕ್ಕೂ ಪ್ರತಿಷ್ಠೆ ಪ್ರಶ್ನೆ: ಕಳೆದು ಹೋದ ತನ್ನ ವರ್ಚ್ಚಸ್ಸನ್ನು ಕಾಂಗ್ರೆಸ್ ಮರುಸ್ಥಾಪಿಸುವ ಗುರಿ ಹೊಂದಿದ್ದರೆ, ಜೆಡಿಎಸ್ ಸದ್ದಿಲ್ಲದೆ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್ಆರ್ ಕಾಂಗ್ರೆಸ್ನ್ನು ಹಿಂದಿಕ್ಕಿ, ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವ ಉದ್ದೇಶ ಹೊಂದಿದೆ. ಇನ್ನು ಬಿಎಸ್ಸಾರ್ಗೆ ತನ್ನ ಅಸ್ತಿತ್ವ, ಪ್ರತಿಷ್ಠೆ ಪ್ರಶ್ನೆ ಇದೆ.
ಬಿಜೆಪಿಗೆ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಹೊರತಾಗಿ ಜಿಲ್ಲೆಯಲ್ಲಿ ಪಕ್ಷಕ್ಕೆ ಸಾಮರ್ಥ್ಯ ಇದೆ ಎಂದು ಬಿಂಬಿಸುವ ನಿಟ್ಟಿನಲ್ಲಿ ಈ ಚುನಾವಣೆ ಮಹತ್ವದ್ದಾಗಿದೆ. ಕಾಂಗ್ರೆಸ್ ಎಲ್ಲ ವಾರ್ಡ್ಗಳ ಜವಾಬ್ದಾರಿಯನ್ನು ವಿವಿಧ ಮುಖಂಡರಿಗೆ ಹಂಚಿಕೆ ಮಾಡಿ, ಗೆಲ್ಲಿಸುವಂತೆ ಸೂಚನೆ ನೀಡಿರುವುದರಿಂದ ಈ ಚುನಾವಣೆಯಲ್ಲಿ ಮುಖಂಡರ ವರ್ತನೆ ಹೇಗೆ ಇರುತ್ತದೆ ಎಂಬುದನ್ನು ಕಾದುನೋಡಬೇಕು.
ನಮಗೇನು ಉಪಯೋಗ?: ವಾರ್ಡ್ಗಳಲ್ಲಿ ಪಕ್ಷದ ಅರ್ಭ್ಯ್ಙಗಳು ಗೆದ್ದರೆ ತಮಗೇನು ಉಪಯೋಗ ಎನ್ನುವ ಮನೋಭಾವನೆಯನ್ನು ಆಯಾ ಪಕ್ಷಗಳ ಮುಖಂಡರು ಹೊಂದಿದ್ದಾರೆ. ಇದು ಪಕ್ಷಗಳ ಹಿನ್ನಡೆಗೆ ಕಾರಣವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂತಹ ವಾರ್ಡ್ನ ಅಭ್ಯರ್ಥಿ ಇಂತಹ ಮುಖಂಡನ ಆಪ್ತ ಎನ್ನುವ ಭಾವನೆ ಉದ್ಭವಿಸುವ ಸಾಧ್ಯತೆ ಇರುತ್ತದೆ. ಅವರ ಗೆಲುವಿಗೆ ನಾನ್ಯಾಕೆ ಶ್ರಮಿಸಬೇಕು ಎನ್ನುವ ಮಾತು ಕಾಂಗ್ರೆಸ್ಸಿನಲ್ಲೇ ಹೆಚ್ಚು. ಚುನಾವಣೆಯ ಖರ್ಚು ವೆಚ್ಚ ಭರಿಸುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಾಗಿ ಪಕ್ಷದ ಅಭ್ಯರ್ಥಿ ಹಿನ್ನಡೆಗೆ ಕಾರಣವಾಗುತ್ತದೆ. ಈ ಪರಿಸ್ಥಿತಿ ಈ ಚುವಾವಣೆಯಲ್ಲಿ ಮುಂದುವರಿಯುತ್ತಾ ಎಂಬುದೇ ಕುತೂಹಲ. ಬಳ್ಳಾರಿ ನಗರದಲ್ಲಿ ದಿವಾಕರಬಾಬು, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ ಅವರು ತಮ್ಮದೇಯಾದ ಮತ ಬ್ಯಾಂಕ್ ಹೊಂದಿರುವುದರಿಂದ ಅವರ ಒಗ್ಗಟ್ಟಿನ ಪ್ರದರ್ಶನವೂ ಅಗತ್ಯವಿದೆ.
ಸ್ಟಾರ್ ಕ್ಯಾಂಪೇನರ್: ಬಿಎಸ್ಸಾರ್ ಪಕ್ಷದಲ್ಲಿ ಶ್ರೀರಾಮುಲು, ಸೋಮಶೇಖರ ರೆಡ್ಡಿ, ಶಾಂತಾ, ಸುರೇಶ್ಬಾಬು, ಜಿನಗಾ ಸ್ಟಾರ್ ಕ್ಯಾಂಪೇನರ್ಗಳಾಗಿದ್ದರೆ, ಪೂಜಾಗಾಂಧಿ, ರಕ್ಷಿತಾ ಬಂದರೂ ಬರಬಹುದು. ಜೆಡಿಎಸ್ಗೆ ಸೂರ್ಯನಾರಾಯಣ ರೆಡ್ಡಿ ಹಾಗೂ ಅವರ ಪುತ್ರ ಭರತರೆಡ್ಡಿ, ನಾರಾಯಣರೆಡ್ಡಿ, ಸ್ಟಾರ್ ಕ್ಯಾಂಪೇನರ್ಗಳು. ಕಾಂಗ್ರೆಸ್ನಲ್ಲಿ ದಿವಾಕರಬಾಬು, ಅನಿಲ್ ಲಾಡ್, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಬಿಜೆಪಿಗೆ ಗೃಹಸಚಿವ ಆರ್. ಅಶೋಕ್ ಅವರು ಸ್ಟಾರ್ ಕ್ಯಾಂಪೇನರ್ ಆಗಿ ಬರುವ ಸಾಧ್ಯತೆ ಇದೆ. ಜೆಡಿಎಸ್ಗೆ ಸೂರ್ಯನಾರಾಯಣ ರೆಡ್ಡಿ ಒಬ್ಬರೇ ಜಿಲ್ಲೆಯಲ್ಲಿ ನಾಯಕರು, ಆದರೆ ಕಾಂಗ್ರೆಸ್ನಲ್ಲಿ ಅನೇಕ ಮುಖಂಡರು ಇರುವುದರಿಂದ ಇಂತಹ ಪರಿಸ್ಥಿತಿ ಇಲ್ಲ. ಇದು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಭೀತಿ ಹುಟ್ಟಿಸಿದೆ ಎಂದೇ ಹೇಳಬಹುದು.
ಜಿಲ್ಲಾಡಳಿತ ಕತ್ತಲ ರಾತ್ರಿಯ ಕರಾಮತ್ತಿಗೆ ಸಮರ್ಥವಾಗಿ ಬ್ರೇಕ್ ಹಾಕಿದರೆ, ಇಂತಹ ಭೀತಿ ಯಾವ ರಾಜಕೀಯ ಪಕ್ಷಗಳಿಗೂ ಇರುವುದಿಲ್ಲ. ಆದರೂ ಆಯೋಗ ಚಾಪೆ ಕೆಳಗೆ ತೂರಿದರೆ, ರಾಜಕೀಯ ಪಕ್ಷಗಳು ರಂಗೋಲಿ ಕೆಳಗೆ ತೂರುವ ತಂತ್ರವನ್ನು ಅನುಸರಿಸುತ್ತವೆ ಎಂಬುದು ಜಗಜ್ಜಾಹೀರು.
- ಶಶಿಧರ ಮೇಟಿ