ಬಳ್ಳಾರಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಇಟಿನಾಳ ಗ್ರಾಮದ 17 ವರ್ಷದ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಎಐಎಂಎಸ್ಎಸ್ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ವಿದ್ಯಾರ್ಥಿನಿಯ ಮೇಲೆ 3 ಮಂದಿ ಪಾತಕಿಗಳು ಸಾಮೂಹಿಕ ಅತ್ಯಾಚಾರ ಮಾಡಿ ನಂತರ ಆಕೆಯ ಕೈಕಾಲು ಕಟ್ಟಿ ಹಾಳು ಬಾವಿಗೆ ತಳ್ಳಿರುವ ಘಟನೆ ಅತ್ಯಂತ ಆಘಾತಕಾರಿಯಾಗಿದೆ.
ಇಂತಹ ಘಟನೆಗಳು ನಡೆಯುತ್ತಿರುವುದು ಇಡೀ ದೇಶವೇ ತಲೆತಗ್ಗಿಸುವಂತಹ ಸಂಗತಿಯಾಗಿದ್ದು, ದೇಶದಲ್ಲಿ ಹೆಣ್ಣುಮಕ್ಕಳಿಗೆ ಭದ್ರತೆ ಇಲ್ಲ ಎನ್ನುವುದನ್ನು ಇಂತಹ ಘಟನೆಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿವೆ ಎಂದು ದೂರಿದೆ.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ತನಿಖೆಯನ್ನು ಶೀಘ್ರವಾಗಿ ನಡೆಸಬೇಕು, ಅಪರಾಧಿಗಳಿಗೆ ಉಗ್ರ ಶಿಕ್ಷೆ ನೀಡಬೇಕು. ದೈಹಿಕ ಹಾಗೂ ಮಾನಸಿಕವಾಗಿ ಆಘಾತಕ್ಕೊಳಗಾಗಿರುವ ವಿದ್ಯಾರ್ಥಿನಿಯ ಶುಶ್ರೂಷೆಯ ಸಂಪೂರ್ಣ ಜವಾಬ್ದಾರಿ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಎಐಎಂಎಸ್ಎಸ್ ಆಗ್ರಹಿಸಿದೆ.