ಗುಟ್ಟು ಬಿಡದ ಮತದಾರ: ಯಾರಿಗೆ ಮೂಗುದಾರ

Updated on: 

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 5
ಸ್ಥಳೀಯ ನಗರ ಸಂಸ್ಥೆ ಚುನಾವಣೆ ಅಬ್ಬರದ ಪ್ರಚಾರ ಕೊನೆಗೊಂಡಿದೆ. ಮತದಾರನ ಮನೆಯಂಗಳದಲ್ಲಿ ಮತ ಬೇಟೆಯಾಡುತ್ತಿರುವ ಪಕ್ಷದ ನಾಯಕರಿಗೆ ಮತದಾರ ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ.
23 ವಾರ್ಡ್‌ಗಳನ್ನು ಹೊಂದಿರುವ ಇಲ್ಲಿನ ಪುರಸಭೆಯಲ್ಲಿ ನಿರಂತರವಾಗಿ ಜೆಡಿಎಸ್ 4 ಬಾರಿ ಅಧಿಕಾರ ನಡೆಸಿದ್ದು, ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಾ ಬಂದಿದೆ, ಅಂದು ಪ್ರಾದೇಶಿಕ ಪಕ್ಷಗಳ ಅಬ್ಬರವಿಲ್ಲದ ವಾತಾವರಣದಲ್ಲಿ ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ಪೈಪೋಟಿ ಎದುರಾಗಿತ್ತು. ಆದರೆ, ಇಂದು ಪ್ರಾದೇಶಿಕ ಪಕ್ಷಗಳು ಸೇರಿದಂತೆ ಪ್ರಮುಖ ಐದು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಜನಪರ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ನೀಡಿ ಎಂದು ಅಭ್ಯರ್ಥಿಗಳು ಕೈ ಮುಗಿಯುತ್ತಾ ಮತದಾರರ ಕಾಲಿಗೆ ಬೀಳುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ಕಣದಲ್ಲಿ ಐದು ಪಕ್ಷಗಳು: ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್, ಕೆಜೆಪಿ ಹಾಗೂ ಪಕ್ಷೇತರರು ಸೇರಿದಂತೆ ಬರೊಬ್ಬರಿ 98 ಮಂದಿ ಸ್ಪರ್ಧಿಸಿದ್ದಾರೆ. ಹಲವಾರು ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಅಲ್ಲಿ ಟಿಕೆಟ್‌ನಿಂದ ವಂಚಿತವಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಕೆಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ಗೆ ಅಡ್ಡಗಾಲಾಗಿದ್ದ ಪಕ್ಷೇತರ ಅಭ್ಯರ್ಥಿಗಳನ್ನು ಮುಖಂಡರು ಕಣದಿಂದ ಹಿಂದೆ ಸರಿಸಿದ್ದಾರೆ. ಕಣದಲ್ಲಿ ಉಳಿದವರು ಇತರೆ ಪಕ್ಷಗಳಿಗೆ ಸ್ಪರ್ಧೆಯೊಡ್ಡುತ್ತಾ ಗೆಲುವಿಗೆ ಅಡ್ಡಗಾಲಾಗಿದ್ದಾರೆ.
ಖಾತೆ ತೆರೆಯುವ ತವಕ: ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿರುವ ಬಿಎಸ್‌ಆರ್ ಕಾಂಗ್ರೆಸ್, ಕೆಜೆಪಿ ಖಾತೆ ತೆರೆಯುವ ತವಕದಲ್ಲಿವೆ. ಇನ್ನು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಅಧಿಕಾರ ಹಿಡಿದೇ ತೀರಬೇಕೆಂಬ ಛಲ ಹೊಂದಿದ್ದು, ಅತ್ತ ಬಿಜೆಪಿ ಶಾಸಕ ಚಂದ್ರ ನಾಯ್ಕ, ಇತ್ತ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷ ಎಂ.ಪಿ. ರವೀಂದ್ರ, ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಹಿಂದೆ ಜೆಡಿಎಸ್ ಹಿಡಿತದಲ್ಲಿದ್ದ ಪುರಸಭೆ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶರು ಕಾಂಗ್ರೆಸ್ ಸೇರ್ಪಡೆಯಾದ ನಂತರದಲ್ಲಿ ಪುರಸಭೆ ಸದಸ್ಯರು ಕಾಂಗ್ರೆಸ್ ಕಡೆಗೆ ವಾಲಿದರು. ಆದರೆ, ಜೆಡಿಎಸ್‌ನಲ್ಲಿದ್ದ ನಾಯಕರು ಮತ್ತು ಕಾರ್ಯಕರ್ತರು ಮೊದಲ ಬಾರಿಗೆ ಕಾಂಗ್ರೆಸ್ ಬಾವುಟ ಹಿಡಿದು ಮತಯಾಚನೆ ಮಾಡುತ್ತಿದ್ದಾರೆ.
ಬಹಿರಂಗ ಪ್ರಚಾರದ ಕೊರತೆ: ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ಭಾನುವಾರ ರೋಡ್ ಶೋ ಮಾಡಿದ್ದರೆ, ಉಳಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಜೆಪಿ ಪಕ್ಷದ ರಾಜ್ಯ ನಾಯಕರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಬಿಜೆಪಿ: ಪಟ್ಟಣದ 23 ವಾರ್ಡ್‌ಗಳಲ್ಲಿ ಬಿಜೆಪಿಯ ಶಾಸಕ ಚಂದ್ರನಾಯ್ಕರಿಗೆ ಜಿಲ್ಲಾ ಕಾರ್ಯದರ್ಶಿ ಎಚ್. ಪೂಜೆಪ್ಪ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎಂ.ಬಿ. ಬಸವರಾಜ, ಗೋವಿಂದರೆಡ್ಡಿ ಪ್ರಚಾರಕ್ಕೆ ಸಾಥ್ ನೀಡಿದ್ದು, ಪಟ್ಟಣಕ್ಕೆ 2ನೇ ಹಂತದ ಕುಡಿಯುವ ನೀರಿನ ಯೋಜನೆ, ರಸ್ತೆ ಅಗಲೀಕರಣ, 100 ಹಾಸಿಗೆ ಆಸ್ಪತ್ರೆ ಸೇರಿದಂತೆ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರ ಸೆಳೆಯುತ್ತಿದ್ದಾರೆ.
ಕಾಂಗ್ರೆಸ್: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಪಿ. ರವೀಂದ್ರ, ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್‌ಮೋಹಿದ್ದೀನ್ ಮನೆ ಮನೆಗೆ ತೆರಳಿ ಎಂ.ಪಿ.  ಪ್ರಕಾಶರು ಕಂಡ ಸುಂದರ ಪಟ್ಟಣದ ಕನಸುಗಳ  ಸಾಕಾರ, ರು. 11 ಕೋಟಿ ಒಳ ಚರಂಡಿ ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳ ಮೂಲಕ  ಮತದಾರ ಮನದಾಳಕ್ಕೆ ಇಳಿದು ಮತಯಾಚನೆ ಮಾಡುತ್ತಿದ್ದಾರೆ.
ಜೆಡಿಎಸ್: ತಾಲೂಕು ಜೆಡಿಎಸ್ ಅಧ್ಯಕ್ಷ ಗಾಣದ ನಿಂಗಪ್ಪ, ಎಲ್.ಪಿ. ಕಠಾರಿನಾಯ್ಕ, ಪುತ್ರೇಶ ಇತರೆ ಮುಖಂಡರು ಜಿಲ್ಲಾ ಮಟ್ಟದ ನಾಯಕರ ಕೊರತೆಯನ್ನು ಎದುರಿಸುತ್ತಿದ್ದರೂ ಪ್ರಚಾರದಿಂದ ಹಿಂದೆ ಬೀಳದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಸಾಧನೆಗಳನ್ನು ಮೆಲುಕು ಹಾಕುತ್ತಾ ಮತದಾರರನ್ನು ಸೆಳೆಯುತ್ತಿದ್ದಾರೆ.
ಬಿಎಸ್‌ಆರ್ ಕಾಂಗ್ರೆಸ್: ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮತದಾರರನ್ನು ಸೆಳೆಯುವಲ್ಲಿ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಸಂಸದೆ ಜೆ.ಶಾಂತಾ, ಉಪಾಧ್ಯಕ್ಷ ಶಿರಾಜ್ ಶೇಖ್ ಬಿಜೆಪಿ ಕುತಂತ್ರ ರಾಜಕಾರಣದಿಂದ ಬೇಸತ್ತು, ಫ್ಯಾನ್‌ನಡಿ ಆಸರೆ ಪಡೆದಿರುವ ನಮಗೆ ಒಂದು ಬಾರಿ ಆಶೀರ್ವಾದ ಮಾಡಿದರೆ ಜನಪರ ಕಾಳಜಿ ಇಟ್ಟುಕೊಂಡು ಅಭಿವೃದ್ಧಿ ಮಾಡುತ್ತೇವೆಂದು ಹೇಳುತ್ತಿದ್ದಾರೆ.
ಉಳಿದಂತೆ ಕೆಜೆಪಿ ಹಾಗೂ ಪಕ್ಷೇತರರು ಯಾರಿಗಿಂತಲೂ ತಾವು ಕಮ್ಮಿ ಇಲ್ಲ ಎಂಬಂತೆ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಕೆಲವು ಪಕ್ಷಗಳು ತಮಗೆ ಟಿಕೆಟ್ ನೀಡಲು ನಿರಾಕರಿಸಿದವರಿಗೆ ತಕ್ಕಪಾಠ ಕಲಿಸಲು ತಮಗೆ ಮತ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com