ಸಂಭ್ರಮದ ಕೊಟ್ಟೂರೇಶ್ವರ ರಥೋತ್ಸವ

Updated on: 

ಕನ್ನಡಪ್ರಭ ವಾರ್ತೆ, ಕೊಟ್ಟೂರು ಮಾ. 6
ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವ ಬುಧವಾರ ಗೋಧೂಳಿಯ ಸಮಯದಲ್ಲಿ ಲಕ್ಷಾಂತರ ಭಕ್ತರ ಮಧ್ಯೆ ಜರುಗಿತು.
ಮೂಲಾ ನಕ್ಷತ್ರ ಸಮಯವಾದ ಸಂಜೆ 4.55ರ ಸುಮಾರಿನಲ್ಲಿ ರಥೋತ್ಸವ ಪ್ರಕ್ರಿಯೆಗೆ ಚಾಲನೆ ದೊರೆಯುತ್ತಿದ್ದಂತೆಯೇ ನೆರೆದಿದ್ದ ಜನಸ್ತೋಮ 'ಕೊಟ್ಟೂರು ದೊರೆಯೇ, ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲುಮುರಿವೆ ಬಹುಪರಾಕ್‌' ಎಂಬ ಘೋಷಣೆ ಕೂಗಿ ರಥ ಎಳೆದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ಪೋಲಿಸರು ಪರಿಸ್ಥಿತಿ ಹತೋಟಿಗೆ ತರಲು ಹರ ಸಾಹಸ ಮಾಡಿದರು.
ತ್ರಿಕಾಲ ಪೂಜಾವಂದಿತ ಕೊಟ್ಟೂರೇಶ್ವರ ಸ್ವಾಮಿಗೆ ಮಧ್ಯಾಹ್ನ ಪೂಜಾ ಕೈಂಕರ್ಯ ನೆರವೇರಿದವು. ಬಳಿಕ ಹಿರೇಮಠದ ಧರ್ಮಕರ್ತ ಬಳಗ ಮತ್ತು ಆಯಗಾರರು ಸಕಲ ಬಿರುದಾವಳಿಗಳೊಂದಿಗೆ ಬಂಗಾರ ಖಚಿತ ಮೂಲ ವಿಗ್ರಹವನ್ನು ಹೊರತರುತ್ತಿದ್ದಂತೆಯೇ ಸ್ವಾಮಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಕ್ರಿಯಾಮೂರ್ತಿ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮೆರವಣಿಗೆ ಕೈಗೊಳ್ಳಲಾಯಿತು.
ಆಕರ್ಷಕ ಸಮಾಳ, ನಂದಿಕೋಲು ಕುಣಿತ, ವಾಲಗ ಮತ್ತಿತರ ವಾದ್ಯಗಳ ನಿನಾದದೊಂದಿಗೆ ಪಲ್ಲಕ್ಕಿ ಮೆರವಣಿಗೆ ಗಾಂಧಿವೃತ್ತ ತಲುಪಿತು. ಅಲ್ಲಿ ಹರಿಜನ ದೇವದಾಸಿ ಮಹಿಳೆ ಕರಿಯಮ್ಮ ಮತ್ತು ಮಗಳು ಉಡುಸುಲಮ್ಮ ಸಾಂಪ್ರದಾಯಿಕ ಕಳಸದಾರತಿ ಬೆಳಗಿದರು. ನಂತರ ಪಲ್ಲಕ್ಕಿ ಮೆರವಣಿಗೆ ತೇರು ಬಯಲುವರೆಗೆ ಸಾಗಿತು.
ಬಳಿಕ ರಥೋತ್ಸವ ಪಾದಗಟ್ಟೆಯವರೆಗೂ ಸಾಗಿ ಸಂಜೆ 6.23ರ ಸುಮಾರಿನಲ್ಲಿ ಮುಖ್ಯ ರಥಬೀದಿಯಲ್ಲಿನ ತನ್ನ ಸ್ಥಳದಲ್ಲಿ ನೆಲೆಗೊಂಡಿತು. ಈ ಮಹಾರಥೋತ್ಸವವನ್ನು ವೀಕ್ಷಿಸಲೆಂದು ರಾಜ್ಯದ ವಿವಿಧೆಡೆಯಿಂದ 4-5 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಈ ಪೈಕಿ 80 ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ಕೊಟ್ಟೂರಿಗೆ ಆಗಮಿಸಿದ್ದು ವಿಶೇಷವಾಗಿತ್ತು.  
ಧೂಳು: ರಥ ಬೀದಿಯುಕ್ಕೂ ಹಾಕಲಾಗಿದ್ದ ಮಣ್ಣನ್ನು ಸರಿಯಾಗಿ ರೋಲಿಂಗ್ ಮಾಡದಿದ್ದರಿಂದ ಪಟ್ಟಣವೆಲ್ಲ ಧೂಳಿನಿಂದ ಮುಳುಗಿತ್ತು. ಸರಿಯಾಗಿ ನಿರ್ವಹಣೆ ಮಾಡದ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಕಳ್ಳರ ಕೈಚಳಕ: ರಥೋತ್ಸವವನ್ನು ವೀಕ್ಷಿಸಲು ಆಗಮಿಸಿದ್ದ ಮೂವರು ಮಹಿಳೆಯರ ಸರಗಳನ್ನು ಕ್ಷಣಮಾತ್ರದಲ್ಲಿಯೇ ಅಪಹರಿಸಿ ನಾಪತ್ತೆಯಾದ ಘಟನೆಯೂ ನಡೆಯಿತು. ಚಪ್ಪರದಹಳ್ಳಿ ಮಹಿಳೆಯ 5 ತೊಲೆ, ಕೊಟ್ಟೂರು ಯುವತಿಯ 2 ತೊಲೆ, ಮತ್ತೊಬ್ಬ ಮಹಿಳೆಯ 4 ತೊಲೆ ಬಂಗಾರದ  ಸರಗಳು ಈ ಸಂದರ್ಭದಲ್ಲಿ ಕಳುವಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com