ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 11
ಬಳ್ಳಾರಿ ಮತದಾರರು ರೆಡ್ಡಿ ಸಹೋದರರ ಆಜ್ಞಾಪಾಲಕರಲ್ಲ. ಪ್ರಜ್ಞಾವಂತ ಮತದಾರರೆಂದು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ಮತದಾರರಿಗೆ ಸ್ವಂತ ವಿವೇಚನೆ ಇದೆ. ಸ್ವಸ್ಥ ಸಮಾಜದ ನಿರ್ಮಾಣ ಮಾಡಲು ಪಣ ತೊಟ್ಟಿದ್ದಾರೆ, ಹಿಂದಿನ ಆಡಳಿತ ಬೇಸತ್ತು ಮತದಾರ ಪ್ರಭುಗಳು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೊತ್ತೂರು ಮೊಹಮದ್ ಇಕ್ಬಾಲ್ ಅವರು 'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮುನ್ನಡೆದ ಕಾಂಗ್ರೆಸ್ ಸರ್ವೇಜನಾ ಸುಖಿನೋಭವಂತು ಎಂಬ ತತ್ವದಡಿ ನಡೆಯುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಲು ಕಾರಣವಾಗಿದೆ. ಇಡೀ ಬಳ್ಳಾರಿ ಜಿಲ್ಲೆಯ ಎಲ್ಲ ಜಾತಿ ಸಮುದಾಯದವರು ಕಾಂಗ್ರೆಸ್ ಬಗ್ಗೆ ಒಲವು ತೋರಿ ಪಕ್ಷದ ಬೆನ್ನಿಗೆ ನಿಂತಿದ್ದಾರೆ ಎಂಬುದನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ಇತಿಶ್ರೀ: ಅಕ್ರಮ ಸಂಪಾದನೆ ಮೂಲಕ ಭಾರಿ ಪ್ರಮಾಣದ ಹಣದ ಹೊಳೆಯನ್ನು ಪ್ರತಿ ಚುನಾವಣೆಯಲ್ಲಿ ಹರಿಸಿ, ಇಡೀ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುವುದು ದಶಕದಿಂದೀಚೆಗೆ ನಡೆದಿದೆ. ಪ್ರಜಾಪ್ರಭುತ್ವ ವಿರೋಧಿ ಕಾರ್ಯಾಚರಣೆಗೆ ಬಳ್ಳಾರಿ ಜಿಲ್ಲಾ ಮತದಾರರು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ಮೂಲಕ ಇತಿಶ್ರೀ ಹಾಡಿದ್ದಾರೆ. ಮತದಾರ ಸಮಾಜದ ಬದಲಾವಣೆಗೆ, ಸರ್ವಜನರ ವಿಕಾಸಕ್ಕೆ ಮತ ನೀಡಿದ್ದಾನೆ. ಇದು ನಿಜಕ್ಕೂ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂದರು.
ಇದು ಒಗ್ಗಟಿನ ಫಲ: ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಪರಿಶ್ರಮ, ಒಗ್ಗಟ್ಟಿನ ಫಲದಿಂದ ಫಲವೇ ಇಂದಿನ ಫಲಿತಾಂಶಕ್ಕೆ ಕಾರಣವಾಗಿದೆ. ದೌರ್ಜನ್ಯ, ಹಣ, ಅಹಂಕಾರ, ದಮನಕಾರಿ ಚಟುವಟಿಕೆಗಳಿಂದ ಬೇಸತ್ತು, ಸ್ವತಂತ್ರ, ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಮತದಾರ ಮತ ನೀಡಿದ್ದಾನೆ. ಈ ಫಲಿತಾಂಶವು ಬಳ್ಳಾರಿ ಜಿಲ್ಲೆಯ ಕಳೆದ ಒಂದು ದಶಕದಿಂದ ಕಳೆದುಕೊಂಡಿದ್ದ ಕಾಂಗ್ರೆಸ್ನ ಗತವೈಭವವನ್ನು ಪಡೆದುಕೊಳ್ಳುವ ಆಶಾಕಿರಣವಾಗಿದೆ. ಇದು ಪಕ್ಷದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದು, ಮತದಾರರ ಒಲವಿನಿಂದಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಫಲಿತಾಂಶ ಪಡೆಯುತ್ತದೆ ಎಂಬ ಸಂದೇಶ ವ್ಯಕ್ತವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಬದಲಾವಣೆಗೆ ಕಾಂಗ್ರೆಸ್ ಮತ: ಪ್ರತಿ ಚುನಾವಣೆಯ ಕೊನೆ ಗಳಿಗೆಯಲ್ಲಿ ನಾಟಕೀಯ ಸಂದರ್ಭಗಳನ್ನು ಸೃಷ್ಟಿಸಿ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳುತ್ತಾ, ಹಣವನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಅಧಿಕಾರದ ಬಲದಿಂದ ಸರ್ಕಾರಿ ಯಂತ್ರಾಂಗವನ್ನು ದುರುಪಯೋಗ ಪಡೆಸಿಕೊಂಡು ಚುನಾವಣೆಯಲ್ಲಿ ಗೆಲ್ಲುವುದನ್ನು ರೂಢಿಯಾಗಿಸಿಕೊಂಡಿದ್ದರು. ಆದರೆ ಈ ನಾಟಕಗಳಿಗೆ, ಹಣದಿಂದ ಮತ ಖರೀದಿ ಮಾಡುವ ತಂತ್ರಗಳಿಗೆ ಜಿಲ್ಲಾಧಿಕಾರಿಗಳು, ಎಸ್ಪಿ ಕಟ್ಟುನಿಟ್ಟಿನ ಕಡಿವಾಣ ಹಾಕಿದ್ದಾರೆ. ಇದರಿಂದಾಗಿ ಮತದಾರರು ಈ ಚುನಾವಣೆಯಲ್ಲಿ ನಿರ್ಭಯದಿಂದ ಮತ ಚಲಾವಣೆ ಮಾಡುವ ಮೂಲಕ ಹೊಸ ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ ಎಂದು ವಿಶ್ಲೇಷಿಸಿದರು.
ಕಳೆದ 10 ವರ್ಷಗಳಿಂದ ದೌರ್ಜನ್ಯದ ಪರಮಾವಾಧಿಯನ್ನು ಕಂಡಿದ್ದ ಜನರ ಒಡಲಲ್ಲಿ ಮಡುಗಟ್ಟಿದ್ದ ಆಕ್ರೋಶ ಕಾಂಗ್ರೆಸ್ ಪಕ್ಷಕ್ಕೆ ಮತಗಳಾಗಿ ಪರಿತರ್ವನೆಯಾಗಿವೆ. ಬಳ್ಳಾರಿ ನಗರ ಅಷ್ಟಲ್ಲದೆ ಪ್ರತಿ ತಾಲೂಕುಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ್ದಾರೆ. ಇದರ ಫಲವಾಗಿಯೇ ದಶಕದ ಹಿಂದಿನ ಕಾಂಗ್ರೆಸ್ ವೈಭವ ಜಿಲ್ಲೆಯಲ್ಲಿ ಮರುಕಳಿಸುವಂತೆ ಮಾಡಿದ್ದಾರೆ.
ಗಾಳಿ ಗೋಪುರ ನಿರ್ಮಾಣ: ದಮನಕಾರಿ ನೀತಿಯನ್ನು ಅನುಸರಿಸುವವರಿಗೆ ಮತದಾರರ ಪ್ರಭುಗಳು ತಕ್ಕ ಪಾಠಕಲಿಸಿದ್ದಾರೆ. ಸೂರಿಲ್ಲದವರಿಗೆ ಸೂರು ಒದಗಿಸಿಕೊಡುತ್ತೇವೆ, ಸಾವಿರಾರು ಜನರಿಗೆ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ, ಸಿಂಗಾಪುರ ಮಾಡುತ್ತೇವೆ ಎನ್ನುವ ಭರವಸೆಯ ಮಾತುಗಳಿಂದ ಗಾಳಿ ಗೋಪುರ ನಿರ್ಮಿಸಿದ್ದಾರೆಯೇ ವಿನಃ ಈಗಲೂ ಬಳ್ಳಾರಿಯಲ್ಲಿ ಜನರು ಬೀದಿ ಬದಿಯ ಕಾಲುವೆಗಳ ಮೇಲೆ ಜೀವಿಸುತ್ತಿದ್ದಾರೆ. ಕೇವಲ ಭರವಸೆಯ ಮಾತುಗಳಲ್ಲಿ ಕಾಲಹರಣ ಮಾಡಿದ್ದಾರೆ ಎಂದು ಬಿಎಸ್ಸಾರ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತನಾದ ತಮ್ಮ ಮೇಲೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಷ್ಟ್ರೀಯ ಹಾಗೂ ರಾಜ್ಯ ಮುಖಂಡರಿಗೆ ವಿಶ್ವಾಸವಿದೆ. ಅವರು ಬಳ್ಳಾರಿ ನಗರದ ಕ್ಷೇತ್ರಕ್ಕೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ, ಕಾಯಾ-ವಾಚಾ-ಮನಸ್ಸಿನಿಂದ ದುಡಿಯುವ ಮೂಲಕ ಜನರ ಆಶೀರ್ವಾದದಿಂದ ಗೆಲುವು ಸಾಧಿಸಿ, ಪಕ್ಷದ ಸಂಘಟನೆ, ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೊತ್ತೂರು ಮೊಹ್ಮದ್ ಇಕ್ಬಾಲ್ ತಿಳಿಸಿದರು.