ಬಳ್ಳಾರಿ: ಮಟಕಾ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ ಆರೋಪಿ ಸಮೇತ ನಗದು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಕುಡುತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಜರುಗಿದೆ. ಕುಡುತಿನಿ ಗ್ರಾಮದ ಹೊಸ ಬಸ್ ನಿಲ್ದಾಣದ ಹಿಂಭಾಗ ಮಟ್ಕಾ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ದಾಳಿ ಮಾಡಿ, ಆರೋಪಿ ನಾಗೇಶ್ ಎಂಬುವನನ್ನು ಬಂಧಿಸಿ, ಆತನಿಂದ ರು. 4,800 ನಗದು ಹಣ ಜಫ್ತು ಮಾಡಿಕೊಂಡಿದ್ದಾರೆ. ಕುಡುತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ: ದೂರು
ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಠಾಣೆ ವ್ಯಾಪ್ತಿಯ ಹಾಲಸಾಗರಹಟ್ಟಿ ಗ್ರಾಮದಲ್ಲಿ ಶುಕ್ರವಾರ ದೇವಸ್ಥಾನಕ್ಕೆ ಹೋದ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ. ನಾಪತ್ತೆಯಾದವಳು ಹಾಲಸಾಗರಹಟ್ಟಿ ಗ್ರಾಮದ ಗೋವಿಂದಮ್ಮ (19). ಈಕೆಯನ್ನು ಪಾಲಯ್ಯನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಅಪ್ಪೇನಹಳ್ಳಿ ತಾಂಡಾ ಸಮೀಪದ ಕೋಟೆ ಗುಡ್ಡದ ಮಾರಮ್ಮ ದೇವಸ್ಥಾನಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದ ಗೋವಿಂದಮ್ಮ ರಾತ್ರಿಯಾದರೂ ಮನೆಗೆ ಬಂದಿಲ್ಲ. ಪತಿ, ಕುಟುಂಬ ಸದಸ್ಯರು ಗಾಬರಿಯಾಗಿ ಗುಡೇಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ಪಿಎಸ್ಐ ನವೀನ ಗೌಡ ತಿಳಿಸಿದ್ದಾರೆ.