ಕಂಪ್ಲಿ: ಇಲ್ಲಿಗೆ ಸಮೀಪದ ನಂ. 5 ಬೆಳಗೋಡುಹಾಳ್ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಮನೆಗಳ ಮಂಜೂರು ವಿಷಯ ಮತ್ತು ಸ್ವತಂತ್ರ ಗ್ರಾಮ ಪಂಚಾಯತಿ ಮಾಡಬೇಕೆನ್ನುವ ವಿಷಯ ಕುರಿತು ಶುಕ್ರವಾರ ಸಾರ್ವಜನಿಕರ ಸಭೆ ನಡೆಯಿತು.
ಗ್ರಾಪಂ ಸದಸ್ಯ ಮಠದ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ನಂ.10 ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ನಂ.5 ಬೆಳಗೋಡುಹಾಳ್, ಕಣಿವಿ ತಿಮ್ಮಲಾಪುರ ಹಾಗೂ ಪ್ರಭುಕ್ಯಾಂಪ್ ಸೇರಿ ಕೇವಲ 34 ಮನೆಗಳು ಮಂಜೂರಾಗಿವೆ. ಸಾಮಾನ್ಯ ವರ್ಗದವರಿಗೆ ಕೇವಲ 4 ಮನೆಗಳು ಮಂಜೂರಾಗಿದ್ದು, ಸರ್ಕಾರ ತಾರತಮ್ಯ ಮಾಡುತ್ತಿದೆ. ಅಧಿಕ ಸಂಖ್ಯೆಯಲ್ಲಿ ವಸತಿ ರಹಿತರು, ನಿವೇಶನ ರಹಿತರು ಇದ್ದು, ನಂ.5 ಬೆಳಗೊಡುಹಾಳ್ ಗ್ರಾಮಕ್ಕೆ ಕನಿಷ್ಠ 100 ಮನೆಗಳನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
2011ರ ಜನಗಣತಿ ಪ್ರಕಾರ ಗ್ರಾಮದ ಜನಸಂಖ್ಯೆ ಸಮೀಪದ ಅರಳಿಹಳ್ಳಿ ಮತ್ತು ನವಗ್ರಾಮ ಸೇರಿದಂತೆ 3500ಕ್ಕೂ ಹೆಚ್ಚಿರುವುದರಿಂದ ಗ್ರಾಪಂ ಪುನರ್‌ವಿಂಗಡಣಾ ಆಯೋಗ ನಂ.5 ಬೆಳಗೋಡುಹಾಳು ಗ್ರಾಮವನ್ನು ಸ್ವತಂತ್ರ ಗ್ರಾಮ ಪಂಚಾಯತಿಯನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಮಾತನಾಡಿ, ಆಗಸ್ಟ್ 14ರೊಳಗೆ ಗ್ರಾಮಸ್ಥರ ಬೇಡಿಕೆಗಳಿಗೆ ಜನಪ್ರತಿನಿಧಿನಿಗಳು, ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದಿದ್ದರೆ, ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಿಎಸ್‌ಐ ಡಿ. ಹುಲುಗಪ್ಪ, ಕಲ್ಯಾಣಿ ದೊಡ್ಡಬಸವರಾಜ, ಸಿ. ಮಲ್ಲನಗೌಡ, ಸಿ. ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ರಮಿಜಾಬಿ, ಸದಸ್ಯ ನಾಗರಾಜ, ಚಂದ್ರಪ್ಪ, ಮುಖಂಡರಾದ ವಿ.ಕೆ. ರಾಮಲಿಂಗಪ್ಪ, ಗೊಂದಿ ಮಂಜುನಾಥ್, ವೈ. ಫಕ್ಕೀರಪ್ಪ, ಎನ್. ಗೋವಿಂದಪ್ಪ, ಹರಿಜನ ಗುಂಡಪ್ಪ, ಸಂಕ್ಟಿ ಪಂಪಣ್ಣ, ಜೀರು ಅಯ್ಯಪ್ಪ, ಮೌಲಾಸಾಬ್, ಮಠದ ವೀರೇಶ್, ಉಮಾಪತಿ, ಬಿ.ದುರುಗಪ್ಪ, ಮಾರೆಪ್ಪ ಇದ್ದರು.
Advertisement