ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಆ. 3
ತುಂಗಭದ್ರಾ ನದಿ ತೀರದ ಹಳ್ಳಿಗಳು ಸೇರಿದಂತೆ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿ ಮಳೆ ಇಲ್ಲದಿದ್ದರೂ ಪ್ರವಾಹ ಭೀತಿ ಮಾತ್ರ ತಪ್ಪಿಲ್ಲ. ಕಾರಣ ಮಲೆನಾಡು ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಈ ಭಾಗದ ಜನತೆ ಪ್ರವಾಹ ಭೀತಿ ಎದುರಿಸುವಂತಾಗಿದೆ.
ಕಳೆದ 2-3 ದಿನಗಳಿಂದ ಭದ್ರಾ ಹಾಗೂ ತುಂಗಾ, ವರದೆ, ಕುಮದ್ವತಿ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಕೆಲ ಹಳ್ಳಿಗಳು ಸಂಪರ್ಕ ಕಡಿದುಕೊಂಡಿವೆ, ಸುಕ್ಷೇತ್ರ ಮದಲಗಟ್ಟಿ ಆಂಜನೇಯ ಸ್ವಾಮಿ ದೇವಸ್ಥಾನವೂ ಜಲಾವೃತ್ತಗೊಂಡಿದೆ. ನದಿ ತೀರದ ಕೆಲ ಗ್ರಾಮಗಳಿಗೆ ಬಸ್ ಸಂಚಾರ ಪೂರ್ಣ ರದ್ದುಗೊಳಿಸಲಾಗಿದೆ. ಮಕರಬ್ಬಿ-ಬ್ಯಾಲಹುಣ್ಸಿ, ಕೋಟಿಹಾಳು-ಅಂಗೂರು, ಹೊಸಹಳ್ಳಿ-ಅಂಗೂರು, ಹೊಸಹಳ್ಳಿ-ಮಾಗಳ ನಡುವಿನ ಹಳ್ಳಗಳಿಗೆ ನದಿ ನೀರು ನುಗ್ಗಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಜಮೀನು ಜಲಾವೃತ: ನದಿ ತೀರದ ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳು, ಅಂಗೂರು, ಹೊಸಹಳ್ಳಿ, ಮಾಗಳ, ಹೊನ್ನೂರು, ನವಲಿ ಸೇರಿದಂತೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮೆಕ್ಕಜೋಳ, ಬತ್ತ, ಮಿಡಿಸೌತೆ, ಹತ್ತಿ ಬೆಳೆಗಳು ಜಲಾವೃತ್ತಗೊಂಡಿದ್ದು ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.
ಪ್ರತಿ ವರ್ಷವೂ ಇದೆ ನದಿ ಪ್ರವಾಹ ಬಂದಾಗ ರೀತಿ ಬೆಳೆ ನಾಶ ಅನುಭವಿಸುತ್ತಿದ್ದೇವೆ, ಆದರೆ ಈವರೆಗೂ ಯಾವ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವ ಗೋಜಿಗೆ ಹೋಗಿಲ್ಲ. 100ಕ್ಕೂ ಹೆಚ್ಚು ಮೋಟಾರ್ ಪಂಪ್ಸೆಟ್ಗಳು ಮುಳುಗಡೆಯಾಗಿದ್ದು, ಪೈಪ್ಗಳು ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎನ್ನುತ್ತಾರೆ ಬನ್ನಿಮಟ್ಟಿ, ಬ್ಯಾಲಹುಣ್ಸಿ ಗ್ರಾಮಸ್ಥರು.
ಕುಡಿವ ನೀರಿಗೆ ತೊಂದರೆ: ಕುಡಿಯುವ ನೀರಿನ ಯೋಜನೆಗಳ ಜಾಕ್ವೆಲ್ ಮತ್ತು ಮೋಟಾರ್ ಪಂಪ್ಸೆಟ್ಗಳು ಮುಳುಗಡೆಯಾಗಿವೆ. ಇದರಿಂದ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ನದಿ ನೀರು ತುಂಬಾ ಕಲುಷಿತವಾಗಿರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿಲ್ಲ. ಸಾಂಕ್ರಾಮಿಕ ಕಾಯಿಲೆಗಳ ಭಯದಲ್ಲಿದ್ದೇವೆ ಎನ್ನುತ್ತಾರೆ ನದಿ ತೀರದ ಗ್ರಾಮಸ್ಥರು.
ಹೆಚ್ಚಿದ ಒಳ ಹರಿವು: ತುಂಗಭದ್ರ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸಿಂಗಟಾಲೂರು ಬ್ಯಾರೇಜ್ನಿಂದ 1,68,306 ಕ್ಯುಸೆಕ್ ಒಳಹರಿವಿದ್ದು, ಇಷ್ಟೇ ಪ್ರಮಾಣದ ಹೊರ ಹರಿವು ಇದೆ. ಬ್ಯಾರೇಜ್ನ 26 ಗೇಟ್ನಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಭದ್ರಾ ಡ್ಯಾಂನಿಂದ ಹೊರ ಹರಿವು ಹೆಚ್ಚಾಗುವ ಸಂಭವ ಇದೆ ಎನ್ನುತ್ತಾರೆ ಸಿಂಟಾಲೂರು ಏತ ನೀರಾವರಿ ಯೋಜನೆ ಎಇಇ ಐಗೋಳ್ ಪ್ರಕಾಶ.
ಸಿಂಟಾಲೂರು ಬ್ಯಾರೇಜ್ನ 26 ಗೇಟ್ಗಳಿಂದ ಹರಿಯುತ್ತಿರುವ ನೀರಿನ ನರ್ತನ ನೋಡಲು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಉಬ್ಬು ತಗ್ಗುಗಳಿಂದ ನರ್ತನ ಮಾಡುತ್ತಾ ಹರಿಯುತ್ತಿರುವ ನೀರನ್ನು ನೋಡಿ ಪ್ರವಾಸಿಗರ ಮೈಮನ ತುಂಬಿಸಿಕೊಳ್ಳುತ್ತಿದ್ದಾರೆ. ಹಿನ್ನೀರಿನಲ್ಲಿ ಈಜುವ ಹಕ್ಕಿಗಳು, ಬ್ಯಾರೇಜ್ ಪಕ್ಕದಲ್ಲಿ ನಿರ್ಮಿಸಲಾದ ಸುಂದರ ಉದ್ಯಾನ ವನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.