ಮಹಿಳೆ ಕೊಲೆ ಆರೋಪಿ ಬಂಧನ

Updated on

ಕೊಟ್ಟೂರು: ಪಟ್ಟಣದ ಲಾಡ್ಜ್ವೊಂದರಲ್ಲಿ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಬಾರಿಕರ ಬಸವರಾಜನನ್ನು ಕೊಟ್ಟೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಳ್ಳು ಹೆಸರು ನಮೂದಿಸಿ ರೂಂ ಪಡೆದಿದ್ದ ಬಸವರಾಜ್ ಮಹಿಳೆಯ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ಸುಳ್ಳನ್ನೇ ಪ್ರತಿ ಹಂತದಲ್ಲೂ ಹೇಳುತ್ತಾ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಸಾಗಿಸಿರುವಾಗಲೇ ಕೊಟ್ಟೂರು ಪಿಎಸ್ಐ ಗುರುರಾಜ್ ಮೈಲಾರ ತಂಡ ತುಮಕೂರಿನಲ್ಲಿ ಆರೋಪಿಯನ್ನು ಬಂಧಿಸಿದೆ.
ಆರೋಪಿ ಬಸವರಾಜ್ ಎಡಗೈಗೆ ಆಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆಯಲು ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜು. 21ರ ರಾತ್ರಿ ದುರುಗಮ್ಮಳ ಮುಖ ಮತ್ತು ಗುಪ್ತಾಂಗಕ್ಕೆ ಫೆವಿಕ್ವಿಕ್ ಸುರಿದು ಕೊಲೆಗೆ ಯತ್ನಿಸಿದ್ದ ಸಂದರ್ಭದಲ್ಲಿ ಕೈಗೆ ಫೆವಿಕ್ವಿಕ್ ಚರ್ಮಕ್ಕೆ ತಾಗಿ ಗಾಯವಾಗಿತ್ತು. ಅಲ್ಲದೇ ಲಾಡ್ಜ್ನ ಟೆರೆಸ್ ಮೇಲಿಂದ್ ಜಿಗಿದು ಪರಾರಿಯಾಗಿದ್ದ. ಈ ವೇಳೆ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆದಿದ್ದ. ಈ ಬಗ್ಗೆ ಮಾಹಿತಿ ಪಡೆದು ಪೊಲೀಸರು ಹುಬ್ಬಳ್ಳಿಗೆ ತೆರಳುವಷ್ಟರಲ್ಲಿಯೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದ.
ಡಿವೈಎಸ್ಪಿ ಪಿ.ಡಿ. ಗಜಕೋಶ ಈ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವರಾಜ್ ವಿರುದ್ಧ ಕೊಲೆ, ಸಾಕ್ಷಿ ನಾಶಪಡಿಸಿದ ಆರೋಪ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದಾಗಿ ಮಾಹಿತಿ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಎಸ್. ಲಾಲ್ಯನಾಯ್ಕ, ಎಸ್ಐ ಗುರುರಾಜ್ ೆಮೈಲಾರ್ ಉಪಸ್ಥಿತರಿದ್ದರು.
ತಪ್ಪೊಪ್ಪಿಕೊಂಡು ಆರೋಪಿ:  ಕೆಲಸಕ್ಕೆ ಹೋಗುವುದು ಬೇಡ ಎಂದು ಎಷ್ಟೇ ಹೇಳಿದರೂ ಆಕೆ ಕೇಳದೇ ಹಠ ಹಿಡಿದು ಹಾಸ್ಟೆಲ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಇದು ನನ್ನಿಂದ ಸಹಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿಯೇ ನಾನು ಆಕೆಯನ್ನು ಕೊಲೆ ಮಾಡಿದೆ ಎಂದು ಆರೋಪಿ ಬಸವರಾಜ್ ತಪ್ಪೊಪ್ಪಿಕೊಂಡಿದ್ದಾನೆ.
ಇದರಲ್ಲಿ ಬೇರೆ ಯಾರದೂ ಪಾತ್ರವಿಲ್ಲ. ಪತ್ನಿ ಮತ್ತು ದುರುಗಮ್ಮಳನ್ನು ಸಮಾನವಾಗಿ ಪ್ರೀತಿಸುತ್ತಿದ್ದೆ. ಆಕೆಯನ್ನು ಕೊಲೆ ಮಾಡಲೇ ಬೇಕಾಗಿತ್ತು, ಕೊಲೆ ಮಾಡಿದೆ ಎಂದು ಖಚಿತವಾಗಿ ಹೇಳಿದ.
ಪತ್ನಿಯ ಅಳಲು: ಕೋಟ್ಯಾಧಿಪತಿ ಆಗುವ ನಿಟ್ಟಿನಲ್ಲಿ ಆತ ದುಡಿದು ನಮ್ಮನ್ನು ಸಾಕುತ್ತಿದ್ದ. ಯಾವಾಗ ಈ ದುರುಗಮ್ಮಳ ಸಹವಾಸಕ್ಕೆ ಹೋದನೋ ಅವತ್ತಿನಿಂದಲೇ ನಮಗೆ ಕಷ್ಟ ಬರಲಾರಂಭಿಸಿತು. ಮನೆಯಲ್ಲಿನ ಒಡವೆ, ಬಂಗಾರ ಮತ್ತಿತರ ಸಾಮಾನು ಆಕೆಗಾಗಿ ನಾಶವಾದವು.
ಈ ಕುರಿತು ಆತನನ್ನು ಕೇಳಿದರೆ ಆಕೆಯನ್ನು ಕೊಲೆ ಮಾಡುತ್ತೇನೆ ನಂತರ ನಿನ್ನ ಮತ್ತು ಮಕ್ಕಳೊಂದಿಗೆ ಹಾಯಾಗಿ ಇರೋಣ ಎಂದು ನನ್ನ ಪತಿ (ಆರೋಪಿ ಬಸವರಾಜ್) ಹೇಳುತ್ತಿದ್ದ ಎಂದು ಬಸವರಾಜ್ನ ಪತ್ನಿ ರತ್ನಮ್ಮ ತಿಳಿಸಿದ್ದಾರೆ. ಈ  ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಬಸವರಾಜ್ ಜತೆ ಮದುವೆಯಾಗಿತ್ತು. ತುಂಬಾ ಅನ್ಯೋನ್ಯವಾಗಿಯೇ ಸಂಸಾರ ಸಾಗಿತು. 5 ವರ್ಷಗಳ ನಂತರ ದುರುಗಮ್ಮಳ ಸಹವಾಸಕ್ಕೆ ಆತ ಜೋತು ಬಿದ್ದ. ಆಕೆಯ ಸಹವಾಸದಿಂದ ಲಕ್ಷಾಂತರ ರು. ಮೌಲ್ಯದ ಮನೆ ಮಾರಾಟ ಮಾಡಬೇಕಾಯಿತು ಎಂದು ಕಣ್ಣೀರಿಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com