ಬಳ್ಳಾರಿ: ಬಳ್ಳಾರಿ ತಾಪಂ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಎಂದು ನೋಡೆಲ್ ಅಧಿಕಾರಿ ಕೆ. ಚೆನ್ನಪ್ಪ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೆರೆದ ಕೊಳವೆ ಬಾವಿಗಳಿಂದ ಹಲವಾರು ಅನಾಹುತಗಳು ಸಂಭವಿಸುತ್ತಿವೆ. ಗ್ರಾಪಂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಿರುಪಯುಕ್ತ ಕೊಳವೆ ಬಾವಿಗಳ ಕುರಿತು ಸಮೀಕ್ಷೆ ನಡೆಸಬೇಕು. ನಿರುಪಯುಕ್ತ ಕೊಳವೆ ಬಾವಿ ಕಂಡುಬಂದಲ್ಲಿ ವಿಳಂಬ ಮಾಡದೆ ಮುಚ್ಚಿಸಲು ಕ್ರಮಕೈಗೊಳ್ಳಬೇಕು ಎಂದ ಅವರು, ಕೊಳವೆ ಬಾವಿ ಕೊರೆಯಲು ಜಮೀನುಗಳ ಮಾಲೀಕರು ಗ್ರಾಪಂನಿಂದ ಪರವಾನಗಿ ಪಡೆಯುವುದು ಕಡ್ಡಾಯ. ಈ ಕುರಿತು ಆದೇಶ ಶೀಘ್ರದಲ್ಲೇ ಹೊರಬೀಳಲಿದ್ದು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಿಪಾರಸು ಮಾಡಲಾಗುವುದು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೇಣಿ ಬಸಪ್ಪ ಮಾತನಾಡಿ, ಕುಡಿವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು. ಆದ್ಯತೆಯ ಮೇರೆಗೆ ಕುಡಿವ ನೀರು ಸರಬರಾಜು ಕಾಮಗಾರಿ ಕೈಗೊಳ್ಳಬೇಕು. ಯಾವುದೇ ಸಾಂಕ್ರಾಮಿಕ ರೋಗಗಳು ಉಲ್ಬಣವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕಡಿಮೆಯಾಗುತ್ತಿರುವ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಯೋಜನೆಗಳು ಅನರ್ಹರ ಪಾಲಾಗದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.
Advertisement