ಟಿಬಿ ಮಂಡಳಿಗೆ ಅನ್ಯ ರಾಜ್ಯದವರ ನೇಮಿಸಿ

Updated on

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 6
ತುಂಗಭದ್ರಾ ಜಲಮಂಡಳಿಯಲ್ಲಿ ಉನ್ನತ ಅಧಿಕಾರಿಗಳು, ಕಾರ್ಯದರ್ಶಿಗಳು ಆಂಧ್ರದವರೇ ಆಗಿದ್ದಾರೆ. ಹೀಗಾಗಿ, ಕರ್ನಾಟಕದ ರೈತರಿಗೆ ಸರಿಯಾದ ಸಮಯಕ್ಕೆ, ಸಮರ್ಪಕವಾಗಿ ರೈತರಿಗೆ ನೀರು ಬಿಡದೆ ಕಿರುಕುಳ ಮಾಡುತ್ತಾರೆ. ಇದನ್ನು ತಪ್ಪಿಸಲು ಭಾರಿ ನೀರಾವರಿ ಸಚಿವರು ಕರ್ನಾಟಕ ಮತ್ತು ಆಂಧ್ರಪ್ರದೇಶದವರನ್ನು ಹೊರತುಪಡಿಸಿ ತುಂಗಭದ್ರಾ ಮಂಡಳಿಗೆ ಉನ್ನತ ಅಧಿಕಾರ ಸ್ಥಾನದಲ್ಲಿ ಅನ್ಯ ರಾಜ್ಯದವರನ್ನು ನಿಯುಕ್ತಿಗೊಳಿಸಬೇಕು ಎಂದು ಸಂಸದ ಬಿ. ಶ್ರೀರಾಮುಲು ಹೇಳಿದರು.
ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಬುಧವಾರ ಬಾಗಿನ ಅರ್ಪಿಸಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಲೆನಾಡಿನಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಈ ವರ್ಷ ಅವಧಿಗೆ ಮುನ್ನವೇ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಹವಾಮಾನ ಇಲಾಖೆ, ನೆರೆ ಗಮನಿಸಿ ಕರ್ನಾಟಕದ ರೈತರಿಗೆ ನೀರು ಪೂರೈಸಬೇಕಿತ್ತು. ಈ ಕುರಿತು ರೈತರು ತುಂಗಭದ್ರಾ ಜಲಮಂಡಳಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ನೀರು ಪೂರೈಸಿಲ್ಲ. ಈಗ ಜಲಾಶಯ ಭರ್ತಿಯಾಗಿದ್ದರಿಂದ 90 ಟಿಎಂಸಿ ನೀರು ವ್ಯರ್ಥವಾಗಿ ನದಿಗೆ ಹರಿದು ಹೋಗುತ್ತಿದೆ. ಜಲಾಶಯ ನಮ್ಮ ಆಸ್ತಿ ಅಲ್ಲ. ಇಡೀ ಮಾನವ ಕುಲದ ಆಸ್ತಿ. ಇದರ ಸಂರಕ್ಷಿಸಿ ಮುಂದಿನ ತಲೆಮಾರಿಗೆ ಕೊಡಬೇಕಿದೆ ಎಂದರು.
ಕಾಂಗ್ರೆಸ್‌ನಿಂದ ಜನರಿಗೆ ಬೇಸರ: 15 ತಿಂಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನರಿಗೆ ಬೇಸರವಾಗಿದೆ. ನಿರೀಕ್ಷೆಗಳು ಸುಳ್ಳಾಗಿವೆ. ಆಡಳಿತ ಯಂತ್ರ ದಿಕ್ಕು ತಪ್ಪಿದೆ. ಜನ ಭ್ರಮ ನಿರಸನಗೊಂಡಿದ್ದಾರೆ. ರಾಜ್ಯದಲ್ಲಿ ಶೂಟೌಟ್ ಪ್ರಕರಣಗಳು, ಅತ್ಯಾಚಾರ ಪ್ರಕರಣಗಳಿಂದ ಕರ್ನಾಟಕದ ಘನತೆ ಮಣ್ಣು ಪಾಲಾಗಿದೆ. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದರು.
ಬಿಜೆಪಿ ಆಡಳಿತ ಶ್ಲಾಘನೀಯ: ಜನತೆ ಬಿಜೆಪಿ ಸರ್ಕಾರದ ಉತ್ತಮ ಕಾರ್ಯಗಳನ್ನು ಸ್ಮರಿಸುತ್ತಿದ್ದಾರೆ. ಈ ಬಾರಿ ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲವು ನಿಶ್ಚಿತ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಗಲಿಗೆ ಅರ್ಕಾವತಿ ಡಿನೋಟಿಫಿಕೇಶನ್ ಭ್ರಷ್ಟಾಚಾರ ಹೆಗಲೇರಿದೆ. ಅವರಿಗೆ ಸಿಬಿಐ ಬಗ್ಗೆ ಪ್ರೀತಿಯಿದೆ. ಧೈರ್ಯವಿದ್ದರೆ ಸಿಬಿಐಗೊಪ್ಪಿಸಿ, ತಾವು ಪ್ರಾಮಾಣಿಕರು ಎಂಬುದನ್ನು ಸಾಬೀತುಪಡಿಸಲಿ. 15 ತಿಂಗಳಲ್ಲಿ 2 ಬಜೆಟ್ ನೀಡಿದ ಕಾಂಗ್ರೆಸ್ ಸರ್ಕಾರ ಬಳ್ಳಾರಿ ಜಿಲ್ಲೆಗೆ ಕೊಡುಗೆ ನೀಡಿಲ್ಲ ಎಂದರು.

98,140 ಕ್ಯುಸೆಕ್ ನೀರು ನದಿಗೆ
ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಬುಧವಾರ 30 ಕ್ರಸ್ಟ್ ಗೇಟ್‌ಗಳ ಮೂಲಕ 98,140 ಕ್ಯುಸೆಕ್ ನೀರು ನದಿಗೆ ಹರಿದು ಬಿಡಲಾಗುತ್ತಿದೆ. ಮೂರು ದಿನಗಳಿಗೆ ಹೋಲಿಸಿದರೆ ಬುಧವಾರ ಕಡಿಮೆ ನೀರನ್ನು ನದಿಗೆ ಬಿಡಲಾಗುತ್ತಿದೆ. ತುಂಗಭದ್ರಾ ಜಲಾಶಯಕ್ಕೆ ಬುಧವಾರ 1,9,719 ಕ್ಯುಸೆಕ್ ಒಳಹರಿವು ಇದ್ದು, ತುಂಗಭಧ್ರಾ ಜಲಾಶಯದ 33 ಕ್ರಸ್ಟ್‌ಗಳಲ್ಲಿ ಬುಧವಾರ 30 ಕ್ರಸ್ಟ್‌ಗಳನ್ನು ತೆರೆಯಲಾಗಿದ್ದು, ಆ ಪೈಕಿ 20 ಕ್ರಸ್ಟ್‌ಗಳನ್ನು ಎರಡೂವರೆ ಅಡಿ ಎತ್ತರಿಸಲಾಗಿದೆ. ಉಳಿದ 10 ಕ್ರಸ್ಟ್‌ಗಳನ್ನು ಎರಡು ಅಡಿಗಳನ್ನು ಎತ್ತರಿಸಿ 98,140 ಕ್ಯುಸೆಕ್ ನೀರು ನದಿಗೆ ಹರಿದು ಬಿಡಲಾಗಿದೆ. ತುಂಗಭದ್ರಾ ಜಲಾಶಯದಿಂದ ಮೂರು ದಿನಗಳಿಂದ ಅಧಿಕ ನೀರು ಬಿಟ್ಟಿರುವುದರಿಂದ ಹಂಪಿಯ ಪುರಂದರ ದಾಸರ ಮಂಟಪ ಮತ್ತಿತರ ಸ್ಮಾರಕಗಳು, ಮಂಟಪಗಳು ನೀರಿನಲ್ಲಿ ಜಲಾವೃತವಾಗಿದ್ದವು. ಬುಧವಾರ ಸ್ಪಲ್ಪಮಟ್ಟಿಗೆ ನದಿಯಲ್ಲಿ ನೀರು ಕಡಿಮೆ ಆಗಿದ್ದರಿಂದ ಪುರಂದರ ದಾಸರ ಮಂಟಪ ಸ್ಪಲ್ಪಮಟ್ಟಿಗೆ ಕಾಣುತ್ತಿದೆ. ನದಿಯ ದಡದಲ್ಲಿರುವ ಕೋದಂಡರಾಮ ದೇವಸ್ಥಾನ ಒಳಗೆ ನೀರು ಹೊಕ್ಕಿತ್ತು. ಬುಧವಾರ ದೇವಸ್ಥಾನದ ಮೆಟ್ಟಿಲುಗಳಿಗೆ ನೀರು ಹರಿಯುತ್ತಿದೆ. ನದಿಯಲ್ಲಿ ಸ್ಪಲ್ಪಟ್ಟಿಗೆ ನೀರು ಕಡಿಮೆಯಾಗಿ ಹರಿಯುತ್ತಿದೆ.
ಕಂಪ್ಲಿ-ಗಂಗಾವತಿ ಸೇತುವೆ ಸಂಚಾರ ಮುಕ್ತ
ಕಂಪ್ಲಿ: ನಾಲ್ಕು ದಿನಗಳಿಂದ ಮುಳುಗಡೆಯಾಗಿದ್ದ ಕಂಪ್ಲಿ-ಗಂಗಾವತಿ ಸೇತುವೆಗೆ ಬೃಹದಾಕಾರವಾಗಿ ಸಿಕ್ಕಿ ಹಾಕಿಕೊಂಡಿದ್ದ ಜಲ ಸಸ್ಯಗಳನ್ನು ಇಲ್ಲಿನ ಪುರಸಭೆ ಅಧಿಕಾರಿಗಳು ಜೆಸಿಬಿ, ಪೌರ ಕಾರ್ಮಿಕರ ಸಹಕಾರದೊಂದಿಗೆ ಬುಧವಾರ ತೆರವುಗೊಳಿಸಿದರು. ಪುರಸಭೆ ಮುಖ್ಯಾಧಿಕಾರಿ ಕೆ.ಬಿ. ಬೀರಣಗಿ ಮಾತನಾಡಿ, 1 ಜೆಸಿಬಿ, 15 ಪೌರ ಕಾರ್ಮಿಕರ ಪರಿಶ್ರಮದಿಂದ ಸೇತುವೆಗೆ ಸಿಕ್ಕಿ ಹಾಕಿಕೊಂಡಿದ್ದ ಭಾರಿ ಪ್ರಮಾಣದ ಗಿಡ, ಬಳ್ಳಿಗಳನ್ನು ತೆರವುಗೊಳಿಸಲಾಗಿದೆ ಎಂದರು. ಹಿರಿಯ ಆರೋಗ್ಯ ನಿರೀಕ್ಷಕ ಸಿ. ಫಕ್ರುದ್ದೀನ್ ಇದ್ದರು. 4 ದಿನಗಳಿಂದ ಸಂಚಾರ ಸ್ಥಗಿತಗೊಂಡಿದ್ದ ಸೇತುವೆ ಮೇಲೆ ನೀರು ಕಡಿಮೆಯಾಗಿದ್ದರಿಂದ ದ್ವಿಚಕ್ರ ವಾಹನಗಳು ಮತ್ತು ಪಾದಾಚಾರಿಗಳು ಯಾವುದೋ ಬಂಧನದಿಂದ ಬಿಡುಗಡೆಯಾದಂತೆ ತಂಡೋಪ ತಂಡವಾಗಿ ಕಂಪ್ಲಿಯಿಂದ ಗಂಗಾವತಿ ಕಡೆಗೆ ಮತ್ತು ಗಂಗಾವತಿಯಿಂದ ಕಂಪ್ಲಿ ಕಡೆಗೆ ತೆರಳುತ್ತಿರುವುದು ವಿಶೇಷವಾಗಿ ಕಂಡು ಬಂದಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com