ಬಳ್ಳಾರಿ: ನನ್ನ ವಿರುದ್ಧ ಅನಗತ್ಯವಾಗಿ ಅಪಪ್ರಚಾರ ಮಾಡಿ, ಗೆಲವು ಗಿಟ್ಟಿಸಿಕೊಂಡಿದ್ದಾರೆ. ಆದರೂ ಅಲ್ಲಿನ ಮತದಾರರು ತಮ್ಮನ್ನು ಕೈ ಬಿಟ್ಟಿಲ್ಲ. ಕೇವಲ 5 ಸಾವಿರ ಮತಗಳಿಂದ ಸೋತಿದ್ದೇನೆ, ಅಂದು ಕೇಂದ್ರ ಸರ್ಕಾರದ ಯೋಜನೆಗೆ ಭೂಮಿ ಕೊಟ್ಟಿದ್ದನ್ನು ವಿರೋಧಿಗಳು ಜನರಿಗೆ ತಮ್ಮನ್ನು ತಪ್ಪಾಗಿ ಅರ್ಥೈಸುವಂತೆ ಮಾಡಿದ್ದರು ಎಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ತಿಳಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ವೈ. ಹನುಮಂತಪ್ಪನವರು ಚಿತ್ರದುರ್ಗ ಸಂಸದರಾಗಿದ್ದಾಗ ಆ ಜಿಲ್ಲೆಯ ಹಾಗೂ ಕ್ಷೇತ್ರದ ಜನರು ಗುಳೆ ಹೋಗಬಾರದೆಂದು ಅವರಿಗೆ ಉದ್ಯೋಗ ಒದಗಿಸಲು ಕೇಂದ್ರ ಸರ್ಕಾರದ ಆಟೋಮಿಕ್ ಎನರ್ಜಿ ಸೆಂಟರ್ ಆರಂಭಿಸಲು 20 ಸಾವಿರ ಎಕರೆ ಭೂಮಿ ನೀಡಲಾಗಿತ್ತು. ಇದು ಜನರ ಉಪಯೋಗಕ್ಕಾಗಿ ಮಾಡಲಾಗಿತ್ತು. ವಿರೋಧಿಗಳು ಇದನ್ನು ತಪ್ಪಾಗಿ ಬಿಂಬಿಸಿ, ಮುಂದೆ ಇವರು ಗೆದ್ದರೂ, ಇನ್ನಷ್ಟು ಭೂಮಿ ನೀಡುತ್ತಾರೆಂದು ತಪ್ಪಾಗಿ ಮತದಾರರಿಗೆ ಹೇಳಿದ್ದು ಸೋಲಿಗೆ ಕಾರಣವಾಯಿತೇ ಹೊರತು, ಕ್ಷೇತ್ರದ ಮತದಾರರು ತಮ್ಮ ಕೈಬಿಟ್ಟಿಲ್ಲ ಎಂದರು.
ಕಾಂಗ್ರೆಸ್ ಹೈಕಮಾಂಡ್ ಬಳ್ಳಾರಿ ಜಿಲ್ಲೆಯ ಮುಖಂಡರು ತಮ್ಮನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು, ಮತದಾರರ ಮನೆಬಾಗಿಲಿಗೆ ಹೋಗಿ ಮತ ಕೇಳುತ್ತೇವೆ. ಆ. 7ರಿಂದ ಸಂಗನಕಲ್, ಮೋಕಾ ಗ್ರಾಪಂ ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಮನೆಗಳಿಗೆ ತೆರಳಿ ಮತ ಯಾಚಿಸುತ್ತೇವೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಈ ಹಿಂದೆ ಕ್ಷೇತ್ರದಿಂದ ಆಯ್ಕೆಯಾಗಿದವರು ಸಚಿವರಾದಾಗಲೂ ಅಭಿವೃದ್ಧಿಪಡಿಸಿಲ್ಲ. ಅವರಿಂದಲೇ ಉಪಚುನಾವಣೆ ಎದುರಾಗಿದೆ ಎಂದು ಆರೋಪಿಸಿದರು.
ಶಾಸಕನಾಗಿ ಸಾಕಷ್ಟು ಕೆಲಸ ಮಾಡಬಹುದು, ಪ್ರತಿ ಗ್ರಾಮಗಳ ಜನರು ಸಮಸ್ಯೆಗಳಿಗೆ ಸ್ಪಂದಿಸಿ, ನಿರೀಕ್ಷೆಗಳನ್ನು ಈಡೇರಿಸಬಹುದಾಗಿತ್ತು. ಸಚಿವರಾಗಿ ಈ ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಶ್ರೀರಾಮುಲು ವಿಫಲವಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಇಡಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶ ನನ್ನದಾಗಿದೆ. ರಸ್ತೆ, ಕುಡಿವ ನೀರು, ಮಹಿಳೆಯರಿಗೆ ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶವಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕ್ಷೇತ್ರದ ಜನರು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ನಗರದ ಘಟಕದ ಅಧ್ಯಕ್ಷ ಜೆ.ಎಸ್. ಆಂಜನೇಯಲು ಅವರು ಮಾತನಾಡಿ, ಜನರ ನಿರೀಕ್ಷೆಯಂತೆ ಈ ಹಿಂದಿನ ಶಾಸಕರು ಕೆಲಸ ಮಾಡಿಲ್ಲ. ಆಶೀರ್ವಾದ ಮಾಡಿದ ಮತದಾರರನ್ನು ತಿರಸ್ಕರಿಸಿದ್ದಾರೆ. ಮತ್ತೆ ಅವರು ಮತದಾರರತ್ತ ಬಂದಿದ್ದಾರೆ. ಈ ಚುನಾವಣೆಯಲ್ಲಿ ತಾವು ಗೆಲ್ಲಲಿದ್ದೇವೆ. ಸಾಕಷ್ಟು ಹೋರಾಟ ಮಾಡಿದ್ದೇನೆ. ಕಾರ್ಯಕರ್ತರ ಪರ ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸುಂಡಿ ನಾಗರಾಜಗೌಡ, ಕೌಲ್ ಬಜಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ನಾಗರಾಜ್, ಬುಡಾ ಮಾಜಿ ಅಧ್ಯಕ್ಷ ಜಹೀರ್ ಅಹ್ಮದ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಷೇಕ್ ಇದ್ದರು.
Advertisement