ಜಿ.ಸೋಮಶೇಖರ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜು. 6
ಪ್ರಸಕ್ತ ಹಣಕಾಸಿನ ವರ್ಷದಲ್ಲಿ ನೂತನ ತಾಲೂಕುಗಳ ರಚನೆ ಇಲ್ಲ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ವಿಧಾನಪರಿಷತ್ತಿನಲ್ಲಿ ಹೇಳಿದ್ದು, ಕೊಟ್ಟೂರು ಸೇರಿದಂತೆ 43 ತಾಲೂಕು ರಚನೆ ಪ್ರಸ್ತಾಪಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಿಲಾಂಜಲಿ ಇಟ್ಟಂತಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ 43 ತಾಲೂಕುಗಳ ರಚನೆಗೆ ಹಿಂದೇಟು ಹಾಕುವ ಮಾತುಗಳನ್ನು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಸೂಚ್ಯವಾಗಿ ತೇಲಿಬಿಡುತ್ತಲೇ ಇದ್ದಾರೆ. ಇವರ ಈ ಮಾತು ಹೆಚ್ಚು ಪ್ರಚಾರವಾಗುತ್ತಿದ್ದಂತೆ ಬಿಜೆಪಿ ಶಾಸಕರು ಮತ್ತು ನೂತನ ತಾಲೂಕುಗಳ ಘೋಷಣೆ ಪಟ್ಟಿಯಲ್ಲಿನ ಕೊಟ್ಟೂರು ಸೇರಿದಂತೆ ಇತರ ಪಟ್ಟಣಗಳ ನಾಗರಿಕರು ಹೋರಾಟ ಕೈಗೊಳ್ಳುವ ಹಾದಿಯತ್ತ ಮುಂದಾಗಿದ್ದರು.
ಆಗ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿ, ಸಚಿವ ಶ್ರೀನಿವಾಸ್ ಪ್ರಸಾದ್ ನೂನತ ತಾಲೂಕುಗಳ ರಚನೆಯನ್ನು ಕೈಬಿಟ್ಟಿಲ್ಲ ಹಂತ, ಹಂತವಾಗಿ ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಪ್ರಸಕ್ತ ವರ್ಷದಿಂದಲೇ ಅನುಷ್ಠಾನಗೊಳಿಸಲು ಮುಂದಾಗುತ್ತೇವೆ ಎಂದು ಭರವಸೆ ನೀಡಿರುವುದು ಕೊಂಚ ಮಟ್ಟಿಗೆ ನೆಮ್ಮದಿ ತಂದಿತ್ತು.
ಸರ್ಕಾರ ಮತ್ತೆ ನೂತನ ತಾಲೂಕುಗಳ ರಚನೆ ಪ್ರಕ್ರಿಯೆ ಪ್ರಾರಂಭಿಸಿದ್ದು, 43 ಘೋಷಿತ ತಾಲೂಕುಗಳ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಪಟ್ಟಿಯಲ್ಲಿನ ಪಟ್ಟಣಗಳ ವಾಸ್ತವ ವಿವರಗಳನ್ನು ಅಧಿಕೃತವಾಗಿ ಪಡೆದುಕೊಂಡರು.
ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ತಾಲೂಕು ಪಟ್ಟಿಯಲ್ಲಿನ ಪಟ್ಟಣಗಳಲ್ಲಿ ಸಭೆ ನಡೆಸಿ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು. ಸಂಗ್ರಹದ ಸಮಗ್ರ ವಿವರಗಳನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದ್ದಲ್ಲದೇ ತಾಲೂಕುಗಳ ರಚನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಸೂಚನೆಯನ್ನು ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಪ್ರಕ್ರಿಯೆಗಳು ನಡೆದರೂ ಕಂದಾಯ ಇಲಾಖೆ ಸಚಿವರು ನೂತನ ತಾಲೂಕು ರಚನೆ ಸಾಧ್ಯವಿಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಾಂಗ್ರೆಸ್ ಸರ್ಕಾರ ಹಿಂದಿನ ಸರ್ಕಾರದ ಮಾತನ್ನೇ ಮುಂದುವರೆಸಿ ಹಂತ ಹಂತವಾಗಿ ತಾಲೂಕು ರಚನೆ ಮಾಡುತ್ತೇವೆ ಎಂದು ಹೇಳುತ್ತಲೇ ಬಂದು, ಇದೀಗ ತಾಲೂಕು ರಚನೆ ಪ್ರಕ್ರಿಯೆಗೆ ತಡೆ ನೀಡುವ ಹುನ್ನಾರ ನಡೆಸಿದೆ ಎಂದು ಜನ ಆರೋಪಿಸಿದ್ದಾರೆ.
43 ಘೋಷಿತ ತಾಲೂಕುಗಳ ಹೋರಾಟ ಸಮಿತಿ ಈಗ್ಗೆ 5 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಈ ಸಂಘಟನೆಯ ಅಡಿ ಕಳೆದ ತಿಂಗಳು ಸರ್ಕಾರದ ಮೇಲೆ ಒತ್ತಾಸೆ ತರುವ ಸಲುವಾಗಿ ತಹಸೀಲ್ದಾರ್, ಜಿಲ್ಲಾಧಿಕಾರಿಗಳ ಮೂಲಕ ನೂತನ ತಾಲೂಕುಗಳ ರಚನೆಯನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು. ಸಂದರ್ಭ ಬಂದರೆ ಹೋರಾಟಕ್ಕಿಳಿಯುವ ಮಾತನ್ನೂ ಆಡಿತ್ತು.
43 ಘೋಷಿತ ತಾಲೂಕುಗಳ ಹೋರಾಟ ಸಮಿತಿಯ ರಾಜ್ಯ ಖಜಾಂಚಿ ಮತ್ತು ಸಂಚಾಲಕ ಪಿ. ಶ್ರೀಧರಶೆಟ್ಟಿ ಮಾತನಾಡಿ, ಸರ್ಕಾರದ ಈ ಹೇಳಿಕೆ ಖಂಡನೀಯ. ಹೋರಾಟ ಸಮಿತಿಯೊಂದಿಗೆ ಸಿದ್ದರಾಮಯ್ಯ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಜು. 23 ಅಥವಾ 25ರಂದು ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಾಲೂಕುಗಳ ರಚನೆಯ ಹಕ್ಕೊತ್ತಾಯ ಮಂಡಿಸುತ್ತೇವೆ. ಆಗ ಸರ್ಕಾರ ಸ್ಪಷ್ಟ ಭರವಸೆ ನೀಡದಿದ್ದರೆ ಹೋರಾಟ ಇಲ್ಲವೇ ನ್ಯಾಯಾಲಯದ ಮೊರೆ ಹೋಗುವತ್ತ ಮುಂದಾಗುತ್ತೇವೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ಸಿದ್ದರಾಗಿದ್ದೇವೆ ಎಂದಿದ್ದಾರೆ.